ಬಂಡೀಪುರ: ಸಫಾರಿ ವಾಹನದ ಮುಂದೆ ಹುಲಿ "ಕ್ಯಾಟ್" ವಾಕ್; ಇಲ್ಲಿದೆ ಕಣ್ಣು ಕುಕ್ಕುವ ದೃಶ್ಯ
ಚಾಮರಾಜನಗರ, ನವೆಂಬರ್, 22: ಚಾಮರಾಜನಗರ ಜಿಲ್ಲೆಯಲ್ಲಿ ಆಗಾಗ ಪ್ರಾಣಿಗಳು ಹಾವಳಿ ಮಾಡುತ್ತಲೇ ಇರುತ್ತವೆ. ಅಲ್ಲದೆ, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿರುವ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ಹುಲಿಯೊಂದು ಸಫಾರಿಗರಿಗೆ ತೀರ ಸಮೀಪದಲ್ಲಿ ದರ್ಶನ ಕೊಟ್ಟು ರೋಮಾಂಚನಗೊಳಿಸಿರುವ ಘಟನೆ ಭಾರತದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.
ಬಂಡೀಪುರದ ಸಫಾರಿಯಲ್ಲಿ ಸಫಾರಿ ವಾಹನದ ಮುಂದೆಯೇ ಹುಲಿಯೊಂದು ಗಾಂಭೀರ್ಯದಿಂದ ಹೆಜ್ಜೆ ಹಾಕಿದೆ. ಜೊತೆಗೆ, ಯಾವುದೇ ಅಂಜಿಕೆ, ಅಳುಕಿಲ್ಲದೇ ತೀರಾ ಸಮೀಪವೇ ಕುಳಿತು ದರ್ಶನ ಕೊಡುವ ಮೂಲಕ ಪ್ರವಾಸಿಗರಿಗೆ ರಸದೌತಣ ನೀಡಿದೆ.

ಇನ್ನು, ಸಫಾರಿಗರು ಹುಲಿ ದರ್ಶನದ ವೇಳೆ ಫೋಟೋಗಳನ್ನು ಸೆರೆ ಹಿಡಿಯುವುವಲ್ಲಿ ನಿರತರಾಗಿದ್ದರು. ಈ ವೇಳೆ ಹುಲಿಯೂ ಕೂಡ ಒಳ್ಳೆಯ ಫೋಸ್ ಕೊಟ್ಟಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹುಲಿಯು ಸಂಕೋಚದ ಪ್ರಾಣಿಯಾಗಿದ್ದು, ಮನುಷ್ಯರನ್ನು ಕಂಡರೇ ಮರೆಯಾಗಲಿದೆ. ಅಲ್ಲದೆ, ಕಾಡಿನಲ್ಲಿ ಹುಲಿ ಕಾಣುವುದು ಅದೃಷ್ಟದ ಸಂಗತಿಯಾಗಿದೆ. ಇಂತಹದರಲ್ಲಿ, ಹುಲಿಯು ಸಮೀಪವೇ ದರ್ಶನ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದರಿಂದ ಪ್ರವಾಸಿಗರು ಸಂತಸಗೊಂಡಿದ್ದಾರೆ.
ಪ್ರವಾಸಿಗರ ಮುಂದೆ ಬೇಟೆಯಾಡಿದ ಚಿರತೆ: ಭಾರತದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಇದೇ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಇತ್ತೀಚೆಗಷ್ಟೇ ಪ್ರವಾಸಿಗರ ಮುಂದೆ ಚಿರತೆ ಬೇಟೆ ಆಡಿರುವ ಘಟನೆ ನಡೆದಿದೆ.
ಬಂಡೀಪುರದ ಸಫಾರಿ ಜೋನ್‌ನಲ್ಲಿ ಚಿರತೆಯೊಂದು ಜಿಂಕೆಯನ್ನು ಅಟ್ಟಾಡಿಸಿ ಬೇಟೆಯಾಡಿದೆ. ಬಳಿಕ, ಜಿಂಕೆಯನ್ನು ಹೊತ್ತು ಮರವೊಂದನ್ನು ಏರಿ ಹಸಿವು ನೀಗಿಸಿಕೊಂಡಿದ್ದು, ಬೇಟೆ ದೃಶ್ಯ ಕಂಡ ಪ್ರವಾಸಿಗರು ಧಂಗಾಗಿದ್ದಾರೆ. ಬೇಟೆ ಆಡುವುದನ್ನು ಕಾಣುವುದು ಅಪರೂಪದ ಸಂಗತಿಯಾಗಿದ್ದು, ಪ್ರಾಣಿ ಪ್ರಿಯರು ಚಿರತೆ ಬೇಟೆ ಕಂಡು ಫಿಧಾ ಆಗಿದ್ದಾರೆ.
ಚಿರತೆ ಹೊಂಚು ಹಾಕಿ ಬೇಟೆ ಆಡಲಿದ್ದು, ತನ್ನ ಬೇಟೆಯನ್ನು ಕಿಲೋ ಮೀಟರ್‌ಗಟ್ಟಲೆ ಅಟ್ಟಾಡಿಸಿ ಹಿಡಿಯುವ ಶಕ್ತಿ ಹೊಂದಿದೆ. ಹಾಗೆಯೇ ಬಂಡೀಪುರದಲ್ಲಿ ಜಿಂಕೆಯ ಮೇಲೆ ಕಣ್ಣು ಹಾಕಿದ ಚಿರತೆ ಶರವೇಗದಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಹಿಡಿದು ಭರ್ಜರಿ ಆಹಾರ ಸವಿದಿದೆ.
ಉಪಟಳ ಕೊಡುತ್ತಿದ್ದ ಚಿರತೆ ಸೆರೆ: ಉಪಟಳ ಕೊಡುತ್ತಿದ್ದ ಚಿರತೆ ಸೆರೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಸಮೀಪ ಇತ್ತೀಚೆಗಷ್ಟೇ ನಡೆದಿತ್ತು.
ಅಂದಾಜು 6 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಸಮೀಪ ಸ್ಥಗಿತಗೊಂಡಿದ್ದ ಕರಿಕಲ್ಲು ಕ್ವಾರಿಯನ್ನು ಈ ಚಿರತೆ ಅವಾಸ ಮಾಡಿಕೊಂಡಿತ್ತು. ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಸುತ್ತಮುತ್ತಲು ಜಾನುವಾರುಗಳ ಮೇಲೆ ದಾಳಿ ನಡೆಸಿ ಉಪಟಳ ಕೊಡುತ್ತಿತ್ತು. ಬಿಆರ್‌ಟಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯ ಅಧಿಕಾರಿಗಳು ಚಿರತೆ ಸೆರೆಗಾಗಿ ಬೋನ್ ಇರಿಸಿದ್ದರು.
ಆಹಾರ ಅರಸಿ ಬಂದ ಚಿರತೆ ಬೋನಿಗೆ ಸೆರೆಯಾಗಿದ್ದು, ಬೋನಿಗೆ ಸೆರೆ ಸಿಕ್ಕ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮಸ್ಥರು ನಿರಾಳರಾಗಿದ್ದಾರೆ. ಬಳಿಕ ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿದುಬಂದಿತ್ತು.












Click it and Unblock the Notifications