ಗುಂಡ್ಲುಪೇಟೆ: ಹುಲಿ ದಾಳಿಯಿಂದ ಕುರಿಗಾಹಿಗಳಿಬ್ಬರಿಗೆ ಗಂಭೀರ ಗಾಯ
ಚಾಮರಾಜನಗರ, ಫೆಬ್ರವರಿ, 12: ಕುರಿಗಾಹಿಗಳ ಮೇಲೆ ಹುಲಿ ದಾಳಿ ನಡೆಸಿ ಇಬ್ಬರನ್ನು ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ಸೋಮವಾರ (ಫೆಬ್ರವರಿ 12) ಮಧ್ಯಾಹ್ನ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಜವರಶೆಟ್ಟಿ ಹಾಗೂ ಶಿವಶೆಟ್ಟಿ ಎಂಬುವವರು ಹುಲಿ ದಾಳಿಯಿಂದ ಗಾಯಗೊಂಡು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಶೆಟ್ಟಿ, ಜವರಶೆಟ್ಟಿ ಅವರ ಎದೆ, ಮೊಣಕಾಲು, ತೊಡೆ, ಬೆನ್ನಿಗೆ ಪರಚಿ ಹುಲಿ ಗಾಯಗೊಳಿಸಿದೆ.

ಶಿವಪುರ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸುವ ವೇಳೆ ಮೇಕೆಯೊಂದನ್ನು ಹುಲಿ ಹಿಡಿದಿದೆ. ಮೇಕೆಯನ್ನು ಬಚಾಬ್ ಮಾಡಲು ಈ ಇಬ್ಬರು ಕೂಗಾಡಿ ಹತ್ತಿರ ಹೋದ ವೇಳೆ ಮೇಕೆಯನ್ನು ಬಿಟ್ಟು ಇವರಿಬ್ಬರ ಮೇಲೆ ಹುಲಿ ಎಗರಿ ಗಾಯಗೊಳಿಸಿದೆ. ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಪುಟ್ಟಸಿದ್ದಯ್ಯ ಹಾಗೂ ಇನ್ನಿತರರು ದೌಡಾಯಿಸಿ ಬೆದರಿಸಿದ ಬಳಿಕ ಹುಲಿ ಕಾಡಿನತ್ತ ಓಡಿದೆ ಎಂದು ತಿಳಿದುಬಂದಿದೆ.
ಹುಲಿ ಮನುಷ್ಯರ ಮೇಲೆ ದಾಳಿ ಮಾಡಲು ಮುಂದಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಕೂಡಲೇ ಹುಲಿ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.












Click it and Unblock the Notifications