ಚಾಮರಾಜನಗರದಲ್ಲಿ ಅಪಘಾತ; ಸ್ಥಳದಲ್ಲೇ ಮೂವರ ಸಾವು, 15 ಮಂದಿಗೆ ಗಾಯ
ಚಾಮರಾಜನಗರ, ಜೂನ್ 15: ಮದುವೆ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಬೊಲೆರೋ ಪಿಕ್ ಅಪ್ ವಾಹನ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಹದಿನೈದು ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೊರಮನಕತ್ತರಿ ಜೆ.ವಿಲೇಜ್ ಬಳಿ ಅಪಘಾತ ನಡೆದಿದ್ದು, ವಾಹನದಲ್ಲಿದ್ದ ಚಿಕ್ಕಸಿದ್ದಮ್ಮ (55), ನಂಜುಂಡಯ್ಯ (60), ಸೀಮೆಎಣ್ಣೆ ನಾಗ (55) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇವರೆಲ್ಲ ಹನೂರು ತಾಲೂಕಿನ ಹುಣಸೇಪಾಳ್ಯ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಮಧುವನಹಳ್ಳಿಯಲ್ಲಿ ಇವರೆಲ್ಲ ಮದುವೆಗೆ ಹೋಗಿದ್ದು, ಹುಣಸೇಹಳ್ಳಿಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಅವಘಡದಲ್ಲಿ ಗಾಯಗೊಂಡ ಹದಿನೈದು ಮಂದಿಯನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎನ್ನಲಾಗಿದೆ. ವೇಗವಾಗಿ ಚಾಲನೆ ಮಾಡಿದ್ದರಿಂದ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ವಾಹನ ಉರುಳಿಬಿದ್ದಿದೆ. ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications