ಉಗ್ರರ ತರಬೇತಿಗೆ ಗುಂಡ್ಲುಪೇಟೆಯಲ್ಲಿ ಭೂಮಿ ಖರೀದಿಗೆ ಯತ್ನ?
ಚಾಮರಾಜನಗರ, ಜನವರಿ 17: ಈ ಬಾರಿ ಗಣರಾಜ್ಯೋತ್ಸವದ ವೇಳೆ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿರುವುದು ಉಗ್ರರ ಬಂಧನದ ಬಳಿಕ ಬಯಲಾಗಿದೆ.
ಇಂತಹ ಉಗ್ರರಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ತರಬೇತಿ ನೀಡಲು ಜಮೀನು ಖರೀದಿಸುವ ಪ್ರಯತ್ನ ನಡೆದಿತ್ತು ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಇದನ್ನು ಕೇಳಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಭೂಮಿ ಕೊಳ್ಳುವ ಹೊಣೆಗಾರಿಕೆಯನ್ನು ತನ್ನ ನಂಬಿಕಸ್ಥ ಬಂಟ ಮನ್ಸೂರ್ ಖಾನ್ ಎಂಬಾತನಿಗೆ ರಾಜ್ಯದ ಐಸಿಸ್ ಸಂಘಟನೆಯ ಕಮಾಂಡರ್ ಮೆಹಬೂಬ್ ಪಾಷಾ ವಹಿಸಿದ್ದ ಎನ್ನಲಾಗಿದೆ.

ನಿರ್ಜನ ಜಾಗಕ್ಕಾಗಿ ಹುಡುಕಾಟ
ಮೆಹಬೂಬ್ ಪಾಷಾ ಸೂಚನೆ ಮೇರೆಗೆ ಮನ್ಸೂರ್, ಗುಂಡ್ಲುಪೇಟೆಗೆ ತೆರಳಿ ಜನ ಸಂಚಾರದಿಂದ ದೂರವಿರುವ ಅರಣ್ಯ ಪ್ರದೇಶದ ವ್ಯಾಪಿಯಲ್ಲಿರುವ ನಿರ್ಜನ ಜಾಗಕ್ಕಾಗಿ ಹುಡುಕಾಟ ನಡೆಸಿದ್ದ ಎಂಬ ಮಾಹಿತಿ ಬಯಲಾಗಿದೆ. ಇತ್ತೀಚೆಗೆ ಪಾಷಾನ ಸಂಪರ್ಕ ಜಾಲದಲ್ಲಿದ್ದ ಇಬ್ಬರನ್ನು ಗುಂಡ್ಲುಪೇಟೆಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ವಿಚಾರಿಸಿದಾಗ ಜಮೀನು ಖರೀದಿ ರಹಸ್ಯ ಬಯಲಾಗಿದೆ.

ಟ್ರೇನಿಂಗ್ ಕ್ಯಾಂಪ್ ಕಟ್ಟುವ ಯೋಜನೆ
ಪ್ರಾಥಮಿಕ ಹಂತದಲ್ಲಿದ್ದ ಕಾರಣ ಜಮೀನು ವ್ಯವಹಾರ ಸ್ಥಗಿತವಾಗಿದೆ. ತನ್ನ ಟ್ರಸ್ಟ್ ಹೆಸರಿನಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ ಸಾಮಾಜಿಕ ಚಟುವಟಿಕೆಯ ನೆಪದಲ್ಲಿ ಭೂಮಿ ಖರೀದಿಸಿ, ಆ ನಂತರ ಅಲ್ಲಿ ಟ್ರೇನಿಂಗ್ ಕ್ಯಾಂಪ್ ಕಟ್ಟುವುದು ಆತನ ಯೋಜನೆಯಾಗಿತ್ತು. ಈ ಕಾರ್ಯಕ್ಕೆ ಮನ್ಸೂರ್‌ನನ್ನು ನಿಯೋಜಿಸಿದ ಪಾಷಾ ನಂತರ ಮನ್ಸೂರ್ ಮೂಲಕವೇ ಗುಂಡ್ಲುಪೇಟೆ ತಾಲೂಕಿನಲ್ಲಿ ಭೂಮಿ ಖರೀದಿ ವ್ಯವಹಾರಕ್ಕೆ ಯತ್ನಿಸಿದ್ದ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಮೌಲ್ವಿಯಿಂದ ಬಯಲಾಯ್ತು ವಿಷಯ
ಗುಂಡ್ಲುಪೇಟೆಯಲ್ಲಿ ಉದ್ದೇಶಿತ ತರಬೇತಿ ಶಿಬಿರದ ಸುಳಿವು ಲಭಿಸಿತು. ಇದರ ಬೆನ್ನು ಹತ್ತಿದಾಗ ಮನ್ಸೂರ್ ಸಂಪರ್ಕದಲ್ಲಿ ಸ್ಥಳೀಯ ಮೌಲ್ವಿ ಹಾಗೂ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ ಮಾಹಿತಿ ಸಿಕ್ಕಿತು. ಆಗ ಜಮೀನು ಖರೀದಿಗೆ ಯತ್ನಿಸಿದ ವಿಷಯ ಬೆಳಕಿಗೆ ಬಂದಿದೆ. ಆದರೆ ಅದೃಷ್ಟವಶಾತ್ ಈ ಭೂ ವ್ಯವಹಾರವು ಪ್ರಾಥಮಿಕ ಹಂತದಲ್ಲಿರುವಾಗಲೇ ಮೆಹಬೂಬ್ ಪಾಷನ ಬೆಂಬಲಿಗರು ಸೆರೆಯಾಗಿದ್ದು, ಇದರಿಂದಾಗಿ ಯೋಜನೆ ಕಾರ್ಯಗತವಾಗಿಲ್ಲ ಎನ್ನಲಾಗಿದೆ.
ಒಂದೆಡೆ ಉಗ್ರರು ಮತ್ತೊಂದೆಡೆ ನಕ್ಸಲರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಜನ ಭಯಪಡುವಂತಾಗಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ.

ಕೆಲ ತಿಂಗಳಿನಿಂದ ನಕ್ಸಲರ ಹುಡುಕಾಟ
ಕೆಲವು ತಿಂಗಳ ಹಿಂದೆ ನಕ್ಸಲರಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಉಗ್ರರೇ ಇಲ್ಲಿಗೆ ಬಂದಿದ್ದರು ಎಂಬುದು ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಳ್ಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್ ಮಾತನಾಡಿ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಭಾಗದಲ್ಲಿ ಒಂದು ಕಡೆ ನಕ್ಸಲ್ ನುಸುಳುವಿಕೆ ಬಗ್ಗೆ ಮಾಹಿತಿ ಬರುತ್ತಿದ್ದರೆ, ಮತ್ತೊಂದೆಡೆ ಭಯೋತ್ಪಾದಕರು ಇತ್ತ ಆಗಮಿಸಿರುವ ಸಂಗತಿ ಗೊತ್ತಾಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಅನುಮಾನಾಸ್ಪದವಾಗಿ ಸಂಚರಿಸುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲು ಕ್ರಮ ವಹಿಸಲಾಗಿದೆ. ಎಲ್ಲ ಮಸೀದಿ ಮದರಸಾಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚನೆ ನೀಡಲಾಗಿದೆ" ಎಂದು ತಿಳಿಸಿದರು.












Click it and Unblock the Notifications