ಚಾ.ನಗರಕ್ಕೆ ಹರಿವ ನೀರು ತಡೆಯಲು ಸನ್ನದ್ಧವಾದ ತಮಿಳುನಾಡು?
ಚಾಮರಾಜನಗರ, ಜೂನ್ 13: ಕರ್ನಾಟಕದ ಕಾವೇರಿ ನೀರಿನಲ್ಲಿ ಪಾಲು ಕೇಳುತ್ತಾ ಸದಾ ಕಿರಿಕ್ ಮಾಡುವ ತಮಿಳುನಾಡು ಇದೀಗ ಹೊಸ ಯೋಜನೆಗಳಿಗೆ ಕೈ ಹಾಕುವ ಮೂಲಕ ಚಾಮರಾಜನಗರದ ರೈತರಿಗೆ ಶಾಕ್ ನೀಡಲು ಮುಂದಾಗಿದೆ.
ಚಾಮರಾಜನಗರದಲ್ಲಿ ಸುವರ್ಣಾವತಿ ಮತ್ತು ಚಿಕ್ಕಹೊಳೆ ಎಂಬ ಎರಡು ಜಲಾಶಯಗಳಿದ್ದು, ಈ ಜಲಾಶಯಗಳಿಗೆ ಒಂದಷ್ಟು ನೀರು ತಮಿಳುನಾಡಿನಿಂದ ಹರಿದು ಬರುತ್ತದೆ. ಇದೀಗ ಈ ನೀರಿಗೆ ತಡೆಯೊಡ್ಡುವ ಮೂಲಕ ತನ್ನ ದ್ವೇಷ ಸಾಧಿಸಲು ಮುಂದಾಗಿದೆ ಎಂದರೂ ತಪ್ಪಾಗಲಾರದು.

ಇಲ್ಲಿವರೆಗೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾದರೆ ಒಂದಷ್ಟು ನೀರು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಕ್ಕೆ ಹರಿದು ಬರುತ್ತದೆ ಎಂದು ಗೊತ್ತಿದ್ದರೂ ತೆಪ್ಪಗಿದ್ದ ಅಲ್ಲಿನ ಸರ್ಕಾರ ಈಗ ಕರ್ನಾಟಕಕ್ಕೆ ಹರಿದು ಬರುವ ನೀರನ್ನು ತಡೆಯುವ ಸಲುವಾಗಿ ಅಲ್ಲಿಯೇ ಡ್ಯಾಂ ನಿರ್ಮಿಸಲು ಮುಂದಾಗಿದೆ. ಇದು ಚಾಮರಾಜನಗರ ಜಿಲ್ಲೆಯ ಜಲಾಶ್ರಯದ ರೈತರಿಗೆ ಆತಂಕವನ್ನುಂಟು ಮಾಡಿದೆ.
ತಮಿಳುನಾಡಿನ ದಿಂಬಂ ಮತ್ತು ಸತ್ತಿಮಂಗಲ ಕಾಡು-ಬೆಟ್ಟಗಳಲ್ಲಿ ಮಳೆ ಸುರಿದರೆ ಆ ನೀರು ಚಾಮರಾಜನಗರದ ಅವಳಿ ಜಲಾಶಯಗಳಿಗೆ ಹರಿದು ಬರುತ್ತದೆ. ಇನ್ನು ಜಲಾಶಯ ಭರ್ತಿಯಾದರೆ ಇಲ್ಲಿನ ಸುಮಾರು ಎರಡು ಲಕ್ಷ ಜನ ಅದರಿಂದ ಬದುಕು ಕಾಣುತ್ತಾರೆ.
ಇದನ್ನು ಮನಗಂಡ ತಮಿಳುನಾಡು ಈ ನೀರಿಗೂ ತಡೆಯೊಡ್ಡುವ ಪ್ರಯತ್ನ ಮಾಡಿದೆ. ಅದೇನೆಂದರೆ ಬೆಟ್ಟಗುಡ್ಡದಿಂದ ಹರಿದು ಬರುವ ನೀರನ್ನು ತಡೆಹಿಡಿಯುವ ಯೋಜನೆಗೆ ಕೈಹಾಕಿದ್ದು, ಈರೋಡು ಜಿಲ್ಲೆಯ ತಾಳವಾಡಿ ತಾಲೂಕಿನಲ್ಲಿ ಚಿಕ್ಕಹಳ್ಳಿ ಜಲಾಶಯದ ಬಳಿ ಡ್ಯಾಂ ನಿರ್ಮಾಣಕ್ಕೆ ಮುಂದಾಗಿದೆ. ಅಷ್ಟೇ ಅಲ್ಲದೆ, ಅಲ್ಲಿನ ಜಮೀನುಗಳ ಬಳಿ, ಹಳ್ಳ ಕೊಳ್ಳದ ನೀರಿಗೂ ಚೆಕ್ ಡ್ಯಾಂ ನಿರ್ಮಿಸಿ ನೀರನ್ನು ಸಂಪೂರ್ಣವಾಗಿ ಅಲ್ಲಿಯೇ ಹಿಡಿದಿಡುವ ಕಾರ್ಯಕ್ಕೂ ಮುಂದಾಗುತ್ತಿದ್ದಾರೆ.
ಈಗಾಗಲೇ ಚಾಮರಾಜನಗರದ ರೈತರು ನೀರಿಲ್ಲದೆ ಕಂಗಾಲಾಗಿದ್ದು, ಇನ್ನು ಮುಂದೆ ತಮಿಳುನಾಡು ಸರ್ಕಾರದ ಯೋಜನೆಗಳು ಪ್ರಗತಿಗೆ ಬಂದು ಡ್ಯಾಂ, ಚೆಕ್ ಡ್ಯಾಂಗಳು ನಿರ್ಮಾಣವಾಗಿಬಿಟ್ಟರೆ ತಮಿಳುನಾಡು ಬೆಟ್ಟಗುಡ್ಡಗಳ ಪ್ರದೇಶದಿಂದ ನೀರು ಹರಿದು ಬರುವುದು ಸಂಶಯವೇ.
ಮಳೆಯಿಲ್ಲದೆ ಸದಾ ರೈತರನ್ನು ಕಂಗೆಡುತ್ತಿದ್ದ ಸಮಯದಲ್ಲಿ ತಮಿಳುನಾಡಿನಲ್ಲಿ ಮಳೆಯಾದರೆ ಒಂದಷ್ಟು ನೀರು ಹರಿದು ಬಂದು ಜಲಾಶಯಗಳನ್ನು ಸೇರುತ್ತಿದೆ. ಅದರಿಂದ ಒಂದಷ್ಟು ನೀರು ರೈತರ ಬೆಳೆಗಳಿಗೆ ಹರಿದು ಬರುತ್ತದೆ ಎಂಬ ಸಮಾಧಾನವಿತ್ತು. ಆದರೆ ಅದಕ್ಕೂ ತಮಿಳುನಾಡು ತಡೆಯೊಡ್ಡಲು ಮುಂದಾಗಿರುವುದು ರೈತರು ಆತಂಕ ಪಡುವಂತಾಗಿದೆ.












Click it and Unblock the Notifications