ಚಾಮರಾಜನಗರ: ಹನುಮ ದೇವಾಲಯಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಕೇಶ್ ಕುಮಾರ್ ಭೇಟಿ
ಚಾಮರಾಜನಗರ, ಡಿಸೆಂಬರ್, 21: ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಾಮರಾಜನಗರದ ಹರಳುಕೋಟೆ ಆಂಜನೇಯ ದೇವಾಲಯಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಕೇಶ್ ಕುಮಾರ್ ಶಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಚಾಮರಾಜನಗರದ ಜ್ಯೋತಿಷಿಯೊಂದಿಗೆ ಇಂದು ಹನುಮ ದೇಗುಲಕ್ಕೆ ಪತ್ನಿ ಡಿಂಪಿ ಶಾ ಅವರೊಟ್ಟಿಗೆ ಭೇಟಿಕೊಟ್ಟ ನ್ಯಾಯಮೂರ್ತಿಗೆ ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದರು. ಬಳಿಕ, ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಹರಳುಕೋಟೆ ಆಂಜನೇಯ ದೇವರನ್ನು ಬಬ್ರುವಾಹನ ಸ್ಥಾಪಿಸಿದನೆಂಬ ಉಲ್ಲೇಖವಿದೆ. ಈ ದೇಗುಲಕ್ಕೆ ಸುಪ್ರೀಂ ನ್ಯಾಯಾಧೀಶರುಗಳಾಗಿದ್ದ ಎಸ್.ಎ.ಬೊಬ್ಡೆ, ಎನ್.ವಿ. ರಮಣ, ರಂಜನ್ ಗೊಗೋಯ್ ಭೇಟಿ ಕೊಟ್ಟು ಪೂಜೆ ಸಲ್ಲಿಸಿರುವುದು ಇನ್ನೂ ವಿಶೇಷವಾಗಿದೆ.
ಮೂಲ ಸೌಕರ್ಯ ಕಲ್ಪಿಸಲು ಸೂಚನೆ
ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರದಲ್ಲಿ ಇತ್ತೀಚೆಗಷ್ಟೇ ತಿಳಿಸಿದ್ದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದರು. ಬಳಿಕ ನಾಗಮಲೆ ಭವನದಲ್ಲಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದಿಂದ ಸಭೆ ನಡೆಸಿ, ಮಾತನಾಡಿದ ಅವರು, ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಜಾತ್ರೆಗಳ ಸಮಯದಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಲೇ ಇರುತ್ತಾರೆ. ಎಲ್ಲಾ ಭಕ್ತರಿಗೆ ಅನುಕೂಲ ಆಗುವಂತೆ ಮೂಲ ಸೌಕರ್ಯವನ್ನು ಸಮರ್ಪಕವಾಗಿ ಕಲ್ಪಿಸಲು ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದಿದ್ದರು.
ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು
ಭಕ್ತಾಧಿಗಳ ವಾಸ್ತವ್ಯಕ್ಕಾಗಿ ಡಾಮಿಟರಿ ನಿರ್ಮಾಣ ಮಾಡಬೇಕು. ಕ್ಷೇತ್ರದಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಗಿ ಬಹಳ ವರ್ಷಗಳಾಗಿವೆ. ಇದು ಅಗತ್ಯವಾಗಿ ಆಗಬೇಕಾದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿರುವ ಮಹದೇಶ್ವರ ಬೃಹತ್ ಪ್ರತಿಮೆಯನ್ನು ಮುಂದಿನ ತಿಂಗಳ ವೇಳೆಗೆ ಪೂರ್ಣಗೊಳಿಸಿ, ಉದ್ಘಾಟನೆಗೆ ಸಿದ್ದಪಡಿಸಬೇಕು. ಇದಕ್ಕೆ ಹೊಂದಿಕೊಳ್ಳುವಂತೆ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ನಿರ್ದೇಶನ ನೀಡಿದ್ದರು.












Click it and Unblock the Notifications