ಮಡಹಳ್ಳಿ ಗುಡ್ಡದಲ್ಲಿ ಕಲ್ಲುಗಣಿ ದುರಂತ: ಒಂದು ವರ್ಷದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಬಂಧನ
ಚಾಮರಾಜನಗರ, ಮಾರ್ಚ್, 29: ಕಳೆದ ವರ್ಷ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಸಂಭವಿಸಿದ್ದು, ವರ್ಷದ ಬಳಿಕ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಪಗುತ್ತಿಗೆ ಪಡೆದು ಕ್ವಾರಿ ನಡೆಸುತ್ತಿದ್ದ ಮಹಮ್ಮದ್ ಹಕೀಂ ಹಾಗೂ ಮಹಮ್ಮದ್ ಹಿಲಾಲ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಪ್ರಕರಣ ಪ್ರಮುಖ ಆರೋಪಿ ಹಕೀಂ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ. ಆರೋಪಿ ಬಂಧನವಾಗದಿರುವ ಬಗ್ಗೆ ಪೊಲೀಸರ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿದ್ದವು.

ನಂತರ ಕಾರ್ಯಾಚರಣೆ ನಡೆಸಿದ ವಿಶೇಷ ತಂಡ, ಕೇರಳದ ಗುರುವಾಯೂರಿನಲ್ಲಿದ್ದ ಹಕೀಂ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿದ್ದ ಹಿಲಾಲ್‌ನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿ ಮಂಗಳವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷ ಮಾರ್ಚ್ 4 ರಂದು ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದ ಕಲ್ಲುಕ್ವಾರಿ ಕುಸಿದು ಉತ್ತರ ಪ್ರದೇಶ ಮೂಲದ ಬಬ್ಲು, ಮೀರಜ್ ಹಾಗೂ ಸರ್ಫರಾಜ್ ಎಂಬ ಕಾರ್ಮಿಕರು ಕಲ್ಲಿನಡಿ ಸಿಲುಕಿ ಸಾವನ್ನಪ್ಪಿದ್ದರು. ದುರಾಸೆಯಿಂದ ಅವೈಜ್ಞಾನಿಕವಾಗಿ ಕ್ವಾರಿ ನಡೆಸಿದ್ದು ದುರಂತಕ್ಕೆ ಪ್ರಮುಖ ಕಾರಣವಾಗಿತ್ತು.
ಫೋರ್ಜರಿ ಸಹಿ ಮಾಡಿದ್ದ ಆರೋಪಿ ಬಂಧನ
ಜಿಲ್ಲೆಯ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಆನಂದ್ ಅವರ ಹೆಸರನ್ನು ಫೋರ್ಜರಿ ಮಾಡಿ 1 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿತ್ತು.
ಚಾಮರಾಜನಗರ ಎಡಿಸಿ ಕಚೇರಿಯ ಡಿ ಗ್ರೂಪ್ ನೌಕರ ರಾಜೇಶ್ ಫೋರ್ಜರಿ ಮಾಡಿರುವ ಆರೋಪಿಯಾಗಿದ್ದಾನೆ.
ಜಿಲ್ಲಾಧಿಕಾರಿ ಅವರ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮದ ಬ್ಯಾಂಕ್ ಖಾತೆಯಿಂದ ಎಡಿಸಿ ಸಹಿಯನ್ನು ರಾಜೇಶ್ ಫೋರ್ಜರಿ ಮಾಡಿ 1 ಕೋಟಿ ರೂ. ಅಧಿಕ ಹಣವನ್ನು ತನ್ನ ಖಾತೆಗೆ ಮತ್ತು ಇತರರ ಖಾತೆಗೆ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಬೇಜವಾಬ್ದಾರಿ ತೋರಿದ್ದ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. 2021ರಿಂದಲೂ ಈ ಅವ್ಯವಹಾರ ನಡೆಯುತ್ತಿದೆ ಎನ್ನಲಾಗಿದ್ದು, ಇಷ್ಟು ವರ್ಷಗಳಾದರೂ ಆಡಿಟ್‌ನಲ್ಲಿ ಇದು ಬೆಳಕಿಗೆ ಬರಲಿಲ್ಲವೇ? ಜೊತೆಗೆ ಒಬ್ಬ ಡಿ ಗ್ರೂಪ್ ನೌಕರನಷ್ಟೇ ಈ ಅವ್ಯವಹಾರ ನಡೆಸಿದನೇ? ಹಾಗೆಯೇ ಇದಕ್ಕೆ ಬೇರೆಯವರ ಕುಮ್ಮಕ್ಕು ಇದೆಯೇ ಎನ್ನುವ ಅನುಮಾನಗಳು ವ್ಯಕ್ತವಾಗುತ್ತುವೆ.
ಸದ್ಯ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಆರೋಪಿ ರಾಜೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಅವ್ಯವಹಾರದ ಆಳ-ಅಗಲ ತಿಳಿಯಲಿದೆ ಎಂದು ಚಾಮರಾಜನಗರ ಎಸ್‌ಪಿ ಪದ್ಮಿನಿ ಸಾಹೊ ಮಾಹಿತಿ ನೀಡಿದ್ದಾರೆ.
ದಾಖಲೆ ಇಲ್ಲದ ಹಣ, ಚಿನ್ನ ಪೊಲೀಸರ ವಶಕ್ಕೆ
ಇನ್ನು ಕಾಫಿನಾಡು ಚಿಕ್ಕಮಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಇತ್ತೀಚೆಗಷ್ಟೇ ದಾಖಲೆ ಇಲ್ಲದ 2 ಕೋಟಿ 30 ಲಕ್ಷ ಬೆಲೆ ಬಾಳುವ 9 ಕೆ.ಜಿ. 300 ಗ್ರಾಂ ಚಿನ್ನ ವಶ ಪಡಿಸಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ದಾಖಲೆ ಇಲ್ಲದೆ ಪಿಕಪ್‌ನಲ್ಲಿ ಸಾಗಿಸುತ್ತಿದ್ದ 2. 30 ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲಾದ್ಯಂತ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ತರೀಕೆರೆ ಪಟ್ಟಣದ ಪೊಲೀಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಪಿಕಪ್‌ನಲ್ಲಿ ನಾಲ್ಕು ಬಾಕ್ಸ್ ಚಿನ್ನವನ್ನು ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಪಿಕಪ್ ವಾಹನದಲ್ಲಿ ಚಿನ್ನದ ಸರಗಳು ಹಾಗೂ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದು, ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ 2 ಕೋಟಿ 30 ಲಕ್ಷ ರೂಪಾಯಿ ಬೆಲೆ ಬಾಳುವ 9 ಕೆ.ಜಿ. 300 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು.












Click it and Unblock the Notifications