ಚಾಮರಾಜನಗರ: ವಾಕಿಂಗ್‌ಗೆ ತೆರಳಿದ್ದ ವೇಳೆ SSLC ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ
ಚಾಮರಾಜನಗರ, ಆಗಸ್ಟ್, 09: ಚಾಮರಾಜನಗರ, ಆಗಸ್ಟ್, 09: ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟ್‌ನಲ್ಲಿ ಎಸ್ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್ (15) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಈಕೆ ಸಿಎಂಎಸ್ ಅನಾಥಾಲಯದಲ್ಲಿ ವಾಯುವಿಹಾರ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ವೈದ್ಯರು ತಪಾಸಣೆಗೆ ಒಳಪಡಿಸಿದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮೃತಳ ತಾಯಿ ದೂರು ಕೊಟ್ಟಿದ್ದು, ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.
ಮೃತ ವಿದ್ಯಾರ್ಥಿನಿ ಫಿಲಿಶ್(15) ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ತಂದೆ ನಿಧನರಾದ ಬಳಿಕ ಕ್ರೈಸ್ತ ಮಿಷನರಿಯೊಂದು ವ್ಯಾಸಂಗಕ್ಕಾಗಿ ಪಟ್ಟಣದ ಸಿಎಂಎಸ್ ಅನಾಥಾಲಯಕ್ಕೆ ತಂದು ಬಿಟ್ಟಿದ್ದರು ಎಂದು ನಿಲಯ ಪಾಲಕರಾದ ಸೆಲ್ವರಾಜ್ ಮಾಹಿತಿ ನೀಡಿದ್ದಾರೆ.
ಬಾಲಕಿ ಆರೋಗ್ಯವಾಗಿದ್ದು ಧಿಡೀರ್ ಕುಸಿದು ಬಿದ್ದು ಹೃದಯಾಘಾತವಾಗಿರುವುದು ನಮಗೆಲ್ಲರಿಗೂ ಆಘಾತವಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ. ಮೃತ ಬಾಲಕಿಯ ಶವವನ್ನು ಪಟ್ಟಣದ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತತರಿಸಲಾಗಿದೆ.
ತಾಯಿ ಹೊಟ್ಟೆಯಲ್ಲೇ ಸಾವನ್ನಪ್ಪಿದ ಹಸುಗೂಸು
ಮತ್ತೊಂದೆಡೆ ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೇ ಒಂಭತ್ತು ತಿಂಗಳ ಹಸುಗೂಸು ತಾಯಿ ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬೇಲೂರು ಪಟ್ಟಣದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗ್ರಾಮದ ನಿವಾಸಿ ಆಶಾ ಎನ್ನುವವರಿಗೆ ಕಳೆದ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಶಾ ಅವರ ಪತಿ ಹಾಸನದಲ್ಲಿದ್ದು, ಸಹೋದರ ಹೊರಗೆ ಹೋಗಿದ್ದರು. ಹೀಗಾಗಿ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಆಶಾ ಪೋಷಕರು ನಗುಮಗು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು.
ಬೇಲೂರು ಪಟ್ಟಣದಲ್ಲಿದ್ದ ನಗುಮಗು ಆಂಬ್ಯುಲೆನ್ಸ್‌ಗೆ ಎಷ್ಟೇ ಕರೆ ಮಾಡಿದರೂ ಆಂಬ್ಯುಲೆನ್ಸ್ ಸಿಬ್ಬಂದಿ ಕರೆ ಸ್ವೀಕರಿಸಿಲ್ಲ. ಅಷ್ಟರಲ್ಲಾಗಲೇ ಆಶಾ ಅವರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೊನೆಗೆ ಬೇರೆ ದಾರಿ ಇಲ್ಲದೇ ಹಾಸನದಲ್ಲಿರುವ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ.
ಹಾಸನದಿಂದ ಆಂಬ್ಯುಲೆನ್ಸ್ ಬರುವುದರೊಳಗೆ ಖಾಸಗಿ ವಾಹನದಲ್ಲಿ ಕರೆ ತಂದು ಆಶಾ ಅವರನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಮಗು ತಾಯಿ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಆಶಾ ಅವರಿಗೆ ಆಗಸ್ಟ್ 15ರಂದು ಹೆರಿಗೆ ದಿನಾಂಕ ನೀಡಲಾಗಿತ್ತು. ಹೀಗಾಗಿ ಮನೆಯಲ್ಲೇ ಇದ್ದರು. ಆದರೆ ತಡರಾತ್ರಿ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
ಆಂಬ್ಯುಲೆನ್ಸ್ ಚಾಲಕರು ಹಾಗೂ ಬೇಲೂರು ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಬೇಜವಾಬ್ದಾರಿಯಿಂದ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಆರೋಗ್ಯ ಇಲಾಖೆ ವಿರುದ್ಧ ಮಹಿಳೆ ಕುಟುಂಬದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications