ಮಾದಪ್ಪನ ಬೆಟ್ಟಕ್ಕೆ ತೆರಳಿದ ಯುವಕನಿಗೆ ಜಾಹೀರಾತು ಮೂಲಕ ಶುಭ ಹಾರೈಸಿದ ಗೆಳೆಯರು, ಪೋಸ್ಟರ್ ಎಲ್ಲೆಡೆ ವೈರಲ್
ಚಾಮರಾಜನಗರ, ಡಿಸೆಂಬರ್ 12: ಪತ್ರಿಕೆಗಳಲ್ಲಿ ವಿದೇಶ ಪ್ರಯಾಣ, ಶೈಕ್ಷಣಿಕ ಚಟುವಟಿಕೆಗೆ ವಿದೇಶಗಳಿಗೆ ತೆರಳುವವರಿಗೆ ಹಾರೈಸಿ ಜಾಹೀರಾತು ಕೊಡುವುದನ್ನು ನೋಡಿರುತ್ತೀರಿ. ಆದರೆ, ಈ ಗೆಳೆಯರು ಕೊಟ್ಟಿರುವ ಜಾಹಿರಾತು ಮಾತ್ರ ಇದೀಗ ಎಲ್ಲೆಡೆ ವೈರಲ್ ಆಗುವುದಲ್ಲದೇ, ಭಾರೀ ಸದ್ದು ಮಾಡುತ್ತಿದೆ.
ಗೆಳೆಯರ ಗುಂಪೊಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ ಸ್ನೇಹಿತನಿಗೆ ಹಾರೈಸಿ ಜಾಹಿರಾತು ಕೊಟ್ಟು ಎಲ್ಲರ ಗಮನ ಸೆಳೆದಿದ್ದು, ಈ ಜಾಹೀರಾತಿನ ಚಿತ್ರಗಳು ವೈರಲ್ ಆಗುತ್ತಿವೆ. ರವಿ ಬಿ.ಸಿ. ಎಂಬ ಯುವಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದು, ಇವರ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿ ಬಾಬು, ಸಂಜು, ರಂಗ ಹಾಗೂ ಅನಂತು ಎಂಬ ಗೆಳೆಯರು ಶುಭ ಕೋರಿ ಪ್ರಾದೇಶಿಕ ದಿನಪತ್ರಿಕೆ "ಮೈಸೂರು ಮಿತ್ರ"ದಲ್ಲಿ ಇಂದು ಜಾಹಿರಾತು ಕೊಟ್ಟು ಗಮನ ಸೆಳೆದಿದ್ದಾರೆ.

ಇದರಲ್ಲಿ ರವಿ ಬಿ.ಸಿ. ಎಂಬುವರ ಭಾವಚಿತ್ರ ಇದ್ದು, ಉಳಿದ ಯಾವ ವಿವರಗಳು, ಊರು ಸೇರಿದಂತೆ ಇನ್ನಿತರ ವಿವರ ಕೊಟ್ಟಿಲ್ಲ. ಕೆಲ ನೆಟ್ಟಿಗರು ನಕಾರಾತ್ಮಕವಾಗಿ ಕಮೆಂಟಿಸಿದರೇ ಇನ್ನೂ ಕೆಲವರು ಜಾಹಿರಾತು ಕಂಡು ನಗೆ ಬೀರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್
ಸರ್ಕಾರಿ ಇಲಾಖೆಗಳಲ್ಲಿ ಯಾವುದಾದರೂ ಒಂದು ಕೆಲಸ ಆಗಬೇಕೇಂದರೆ ಲಂಚ ಕೊಡಲೇಬೇಕು. ಇಲ್ಲವಾದರೆ ಸಮಯಕ್ಕೆ ತಕ್ಕಂತೆ ನಮ್ಮ ಕೆಲಸ ಆಗುವುದಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಲಂಚದ ಹಾವಳಿ ತಾಂಡವವಾಡುತ್ತಿದೆ. ಇದರ ಮಧ್ಯೆ ಲಂಚಕೋರರನ್ನು ಲೋಕಾಯುಕ್ತಕ್ಕೆ ಹಿಡಿಸಿದವರಿಗೆ 20 ಸಾವಿರ ಬಹುಮಾನ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸಂಬಂಧಪಟ್ಟ ಪೋಸ್ಟ್ ಇದಾಗಿದ್ದು ಎಜಿ. ಈಶ್ವರಪ್ಪ, ಅತ್ತಿಘಟ್ಟ ಹೆಸರಿನಲ್ಲಿ ಪೋಸ್ಟ್ ಹರಿದಾಡುತ್ತಿದೆ. "ಹೊಸದುರ್ಗ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಲಂಚಾವತಾರ ತಾಂಡವಡುತ್ತಿದ್ದು, ಲಂಚ ಕೇಳುವ ಅಧಿಕಾರಿ ಇಲ್ಲವೇ ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ಹಿಡಿದುಕೊಟ್ಟರೆ 20,000 ಬಹುಮಾನವನ್ನು ನೀಡಲಾಗುವುದು," ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
"ಲಂಚ ಕೇಳಿದ ಸಂದರ್ಭದಲ್ಲಿ ನಮಗೆ ಕರೆ ಮಾಡಿದ್ದಲ್ಲಿ ಲಂಚ ಕೇಳಿದವರನ್ನು ಯಾವ ರೀತಿ ಹಿಡಿಸಬೇಕು ಎಂಬ ಸಲಹೆ ಸೂಚನೆಗಳನ್ನು ಸಹ ತಿಳಿಸಿಕೊಡಲಾಗುವುದು. ಲೋಕಾಯುಕ್ತರನ್ನು ಸಂಪರ್ಕಿಸುವ ರೀತಿ ನೀತಿ ತಿಳಿಸುತ್ತೇವೆ, ಇಲ್ಲವೇ ನಾವೇ ಸಂಪರ್ಕ ಮಾಡಿಕೊಡುತ್ತೇವೆ.
ಯಾರಾದರೂ ನಿಮ್ಮ ಕೆಲಸ ಮಾಡಲು ವಿಳಂಬ ಮಾಡಿದಾಗ ಇಲ್ಲ ಲಂಚ ಕೇಳಿದಾಗ ನಮಗೆ ಸಂಪರ್ಕಿಸಿ ಎಂದು ಎ.ಜಿ.ಈಶ್ವರಪ್ಪ, ಅತ್ತಿಘಟ್ಟ, ಮೊಬೈಲ್ ನಂಬರ್ 7259739157 ಎಂದು," ನಮೂದಿಸಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ಕುರಿತು ಮಾತನಾಡಿದ ಈಶ್ವರಪ್ಪ ಅವರು, ನನ್ನ ವಿಚಾರಧಾರೆಗಳು ಬೇರೆ ಬೇರೆ ಇದಾವೆ. ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಸಾರ್ವಜನಿಕರಿಗೆ, ರೈತರಿಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಒಂದಿಷ್ಟು ಬದಲಾವಣೆ ತರಲು ಮುಂದೆ ಬಂದೆ. ಸಮಾಜ ನಮಗೆ ಎಲ್ಲಾ ಕೊಟ್ಟಿದೆ. ನಾವು ಸಮಾಜಕ್ಕೆ ಏನಾದರೂ ಕೊಡಬಹುದು ಎಂಬ ನಿಟ್ಟಿನಲ್ಲಿ ಒಂದೊಳ್ಳೆ ಉತ್ತಮ ಕೆಲಸ ಮಾಡಬೇಕು ಎಂದಾಗ ಈ ರೀತಿ ಬದಲಾವಣೆ ತರಲು ಮುಂದಾಗಿ, ಜನರು ಸರಿಪಡಿಸಲು ಮುಂದಾದರೆ ಜನರು ಮಾತ್ರ ಮುಂದೆ ಬರುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಒಳ್ಳೆಯವರಿಗೆ ಒಳ್ಳೆಯದು ಎಂಬ ಮಾತು ಇತ್ತಲ್ವಾ, ಈ ಮಾತು ಸದ್ಯಕ್ಕೆ ದೂರವಾದುದು ಎಂದರು. ಸಾಮಾಜಿಕ ಕಳಕಳಿ ಇಟ್ಟುಕೊಂಡು ಹೊಸದುರ್ಗ ತಾಲ್ಲೂಕಿನಲ್ಲಿ ಬದಲಾವಣೆ ತರಲು ಚಿಂತನೆ ಮಾಡಲಾಯಿತು. ಈ ಎಲ್ಲ ವ್ಯವಸ್ಥೆಗೆ ಪ್ರಕೃತಿ ಪಾಠ ಕಲಿಸಲಿದೆ. ಮುಂದಿನ ದಿನಗಳಲ್ಲಿ ಇಂತಹ ವ್ಯವಸ್ಥೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಾವಣೆ ತುಂಬಾ ಕಷ್ಟ ಇದೆ ಎಂದು ಬೇಸರ ಹೊರಹಾಕಿದರು.












Click it and Unblock the Notifications