ಚಾಮರಾಜನಗರಕ್ಕೆ ಸಿದ್ದರಾಮಯ್ಯ ಭೇಟಿ; ರೈತರನ್ನು ವಶಕ್ಕೆ ಪಡೆದ ಪೊಲೀಸ್
ಚಾಮರಾಜನಗರ, ನವೆಂಬರ್ 17: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ರೈತ ಮುಖಂಡರನ್ನು ರಾತ್ರೋರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಖಂಡಿಸಿ ಶುಕ್ರವಾರ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಲಿನ ನಾಗರಾಜು ಅವರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ರೈತರು ರಸ್ತೆ ನಡೆಸಿ ಪ್ರತಿಭಟನೆ ನಡೆಸಿದರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉಡಿಗಾಲ ಗ್ರಾಮದಲ್ಲಿ ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯರಸ್ತೆಯನ್ನು ತಡೆದು ಕೆಲಕಾಲ ಧರಣಿ ನಡೆಸಿದ ರೈತ ಮುಖಂಡರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಭೇಟಿ; ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸಿಎಂ ವಿರುದ್ಧ ಯಾವುದೇ ಪ್ರತಿಭಟನೆಗಳನ್ನು ನಡೆಸಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ನಮ್ಮ ಸಂಘದ ತಾಲೂಕು ಅಧ್ಯಕ್ಷರಾದ ಹಾಲಿನ ನಾಗರಾಜು ಅವರನ್ನು ಮುಂಜಾನೆ 4 ಗಂಟೆಯ ವೇಳೆಯಲ್ಲಿ ಪೊಲೀಸರು ವಶಕ್ಕೆ ಪಡೆದಿರುವುದು ಖಂಡನೀಯ ಎಂದು ಧರಣಿ ನಿರತರು ಅಸಮಾಧಾನ ಹೊರಹಾಕಿದರು.
ಮುಖ್ಯಮಂತ್ರಿಗಳು ಬರ ಪರಿಹಾರ ಕೊಟ್ಟಿಲ್ಲ. 10 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ಈಗ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಕಬ್ಬಿನ ಬಾಕಿ ಹಣವನ್ನು ನೀಡಿಲ್ಲ. ಅದರ ಹಣ ಜಿಲ್ಲೆಗೆ 9.5 ಕೋಟಿ ರೂ. ಬರಬೇಕು. ಅದನ್ನು ಕೇಳಲು ಹೋದರೆ ರೈತರನ್ನು ವಶಕ್ಕೆ ಪಡೆಯುವುದು ಎಷ್ಟು ಸರಿ? ಎಂದು ರೈತರು ಪ್ರಶ್ನೆ ಮಾಡಿದರು.
ಸರ್ಕಾರ ರೈತರ ವಿರುದ್ಧ ಇದೇ ರೀತಿ ಧೋರಣೆ ಮುಂದುವರೆಸುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಎಲ್ಲೇ ಬಂದರೂ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯ ಬೆಂಗಳೂರಿನಲ್ಲಿದ್ದಾರೆ. ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ 2023 ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಅವರು ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸಕ್ಕೆ ಆಗಮಲಿಸಲಿದ್ದಾರೆ.












Click it and Unblock the Notifications