ಸಿದ್ದರಾಮಯ್ಯ ಕ್ಷೇತ್ರಗಳನ್ನು ಹುಡುಕುವ ಅಲೆಮಾರಿ : ಶ್ರೀನಿವಾಸಪ್ರಸಾದ್ ವ್ಯಂಗ್ಯ
ಚಾಮರಾಜನಗರ, ಜೂನ್ 7: ಸಿದ್ದರಾಮಯ್ಯ ಅಲೆಮಾರಿ ಪ್ರತಿಪಕ್ಷನಾಯಕ, ಕ್ಷೇತ್ರಗಳನ್ನು ಹುಡುಕುವ ರೊಮ್ಯಾಂಟಿಕ್ ಟ್ರೈಬ್ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ವ್ಯಂಗ್ಯ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ರಾಜಕಾರಣ ಮಾಡಲು ಗೊತ್ತಿಲ್ಲದೇ ಸುಮ್ಮನೆ ಬುರುಡೆ ಬಿಡುತ್ತಿದ್ದಾರೆ. ಮೋದಿ ಮತ್ತು ನೆಹರೂ ಅವರ ನಡುವೆ ಹೋಲಿಕೆ ಮಾಡುವುದು ಹಾಸ್ಯಾಸ್ಪದ. ನೆಹರೂ ಅವರನ್ನು ಹೋಲಿಕೆ ಮಾಡುವ ಬದಲು ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಹೋಲಿಕೆ ಮಾಡಲಿ. ಅಮೇಥಿಯಲ್ಲಿ ಗೆಲ್ಲಲಾಗದೇ ರಾಹುಲ್ ಗಾಂಧಿ ವಯನಾಡಿನಲ್ಲಿ ಬಂದು ಗೆದ್ದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗಳಿಗೆ ಕುಹಕವಾಡಿದರು.
ಇತ್ತೀಚೆಗೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರ ನಡೆದು ದೇಶಾದ್ಯಂತ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದಾರೆ. ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡುವ ಬದಲು ಕೈ ಪಡೆ ಅಮೇಥಿಯನ್ನೇ ಸುತ್ತಾಡಲಿ ಎಂದು ಲೇವಡಿ ಮಾಡಿದರು.

ಇದೇ ವೇಳೆ, ಕಾಂಗ್ರೆಸ್ ಚೆಡ್ಡಿ ಸುಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್ ಎಸ್ ಎಸ್ ಚೆಡ್ಡಿಯಿಂದ ಪ್ಯಾಂಟಿಗೆ ಬದಲಾಗಿ ಬಹಳಷ್ಟು ವರ್ಷಗಳೇ ಆಗಿವೆ. ಈಗ ಅವರು ಚೆಡ್ಡಿ ಹಾಕುತ್ತಿಲ್ಲ, ಚೆಡ್ಡಿ ಸುಡಬೇಕೆಂದರೆ ಕಾಂಗ್ರೆಸ್ ನವರು ತಮ್ಮ ಚೆಡ್ಡಿಗಳನ್ನೇ ಸುಟ್ಟುಕೊಳ್ಳಬೇಕೆಂದು ಕಿಡಿಕಾರಿದರು.
ಹಗರಣ ಇಲ್ಲದ ಸರ್ಕಾರ:
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲಿ ಯಾವುದೇ ಹಗರಣಗಳಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಸಾವಿರಾರು ಕೋಟಿ ರೂ.ಗಳ ಹಗರಣ ನಡೆದಿತ್ತು. ಇದರಿಂದಾಗಿ 10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರವನ್ನು ಜನರು ಕಿತ್ತೊಗೆದರು. ಕಳೆದ 8 ವರ್ಷಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಯಾವುದೇ ಹಗರಣಗಳಿಲ್ಲದೇ ಉತ್ತಮ ಆಡಳಿತ ನಡೆಸಲಾಗುತ್ತಿದೆ ಎಂದರು.

ಹಗರಣಮುಕ್ತ, ಅಭಿವೃದ್ಧಿ ಪರ ಆಡಳಿತದಿಂದಾಗಿ ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಹಿಡಿದಿದೆ. ಬಿಜೆಪಿಯು ರಾಷ್ಟ್ರೀಯ ಪಕ್ಷವಾಗಿದ್ದು ದೂರದೃಷ್ಟಿಯ ನಾಯಕತ್ವ ಇದೆ. ಆದರೆ ಈಗ ಕೇಂದ್ರದಲ್ಲಿ ಬಲಿಷ್ಟವಾದ ರಾಷ್ಟ್ರೀಯ ಪಕ್ಷಗಳಿಲ್ಲ, ಪ್ರಜಾಪ್ರಭುತ್ವದಲ್ಲಿ ಪ್ರಬಲ ವಿಪಕ್ಷಗಳು ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾತನಾಡಿ, ಪಠ್ಯಪುಸ್ತಕಗಳು ಯಾವ ರೀತಿ ಇರಬೇಕು ಎನ್ನುವುದನ್ನು ನಾನು ಮೊದಲೇ ತಿಳಿಸಿದ್ದೆ, ಪಠ್ಯದಲ್ಲಿ ವಾಸ್ತವಿಕ ಅಂಶಗಳು ಇರಬೇಕು, ವೈಜ್ಞಾನಿಕವಾಗಿರಬೇಕು ಮತ್ತು ಮಕ್ಕಳಿಗೆ ಅರ್ಥವಾಗುವಂತೆ ಇರಬೇಕು. ಅವುಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮಬೀರಬೇಕು, ಚಿಂತನೆಗೆ ಹಚ್ಚುವ ರೀತಿಯಲ್ಲಿರಬೇಕು. ಆದರೆ ಈಗ ಪಠ್ಯಪುಸ್ತಕ ಸಮಿತಿ ಎಡವಿದೆ. ಅಂಬೇಡ್ಕರ್ ಅವರ ಪಠ್ಯದಿಂದ ಸಂವಿಧಾನ ಶಿಲ್ಪಿ ಪದವನ್ನು ತೆಗೆದಿದೆ, ಬಸವಣ್ಣ ಅವರ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಇದನ್ನೇ ಮುಖ್ಯಮಂತ್ರಿಗಳು ಈಗಾಗಲೆ ತಿಳಿಸಿದ್ದಾರೆ ಎಂದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications