ಹುಲಿ ದರ್ಶನ ಮಾಡಬೇಕಿದ್ದರೆ ಬಂಡೀಪುರಕ್ಕೆ ಬಂಡಿ ಹತ್ತಿ
ಗುಂಡ್ಲುಪೇಟೆ, ಜನವರಿ 16 : ಈ ಬಾರಿಯ ವಾರಾಂತ್ಯದಲ್ಲಿ ಸಫಾರಿಗಾಗಿ ಬಂಡೀಪುರಕ್ಕೆ ಆಗಮಿಸಿದ ಪ್ರವಾಸಿಗರಿಗೆ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ನೀಡುವ ಮೂಲಕ ಮನಸ್ಸಿಗೆ ಮುದ ನೀಡಿವೆ.
ಬಂಡೀಪುರದ ರಾಯಭಾರಿ ಎಂದೇ ಕರೆಯುತ್ತಿದ್ದ ಪ್ರಿನ್ಸ್ ಹುಲಿಯ ಸಾವಿನ ಬಳಿಕ ಸಫಾರಿ ತೆರಳಿದವರು ಹುಲಿಗಳೇ ಕಾಣುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದರು. ಕಳೆದ ಬೇಸಿಗೆಯಲ್ಲಂತೂ ಕಾಡ್ಗಿಚ್ಚು ಅನಾಹುತದಿಂದಾಗಿ ಪ್ರಾಣಿಗಳೇ ಕಾಣುತ್ತಿರಲಿಲ್ಲ. ಹೀಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಹೋದವರು ಬೇಸರಿಸಿಕೊಂಡು ಬರುತ್ತಿದ್ದರು.
ಆದರೆ ಮಳೆಗಾಲದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿರುವುದು ಸಫಾರಿಗೆ ತೆರಳುವ ಪ್ರವಾಸಿಗರು ಸಂತಸಪಡಲು ಕಾರಣವಾಗಿದೆ. ವೀಕೆಂಡ್ ಟ್ರಿಪ್ ಹೋದ ಪ್ರವಾಸಿಗರಿಗೆ ಇದೀಗ ಸಫಾರಿ ವೇಳೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಎರಡು ದಿನದಲ್ಲಿ 13 ಹುಲಿಗಳ ದರ್ಶನವಾಗಿದೆ.

ಎರಡನೇ ಶನಿವಾರ ಹಾಗೂ ಭಾನುವಾರ ಸಂಕ್ರಾಂತಿ ಹಬ್ಬ ಇದ್ದ ಕಾರಣ ಸತತ ಎರಡು ದಿನಗಳ ಕಾಲ ರಜೆಯಿತ್ತು. ಹೀಗಾಗಿ ಬಂಡೀಪುರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಈ ವೇಳೆಯಲ್ಲಿ ಶನಿವಾರ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಒಂದೇ ದಿನ 8 ಹುಲಿ ಹಾಗೂ ಸಂಕ್ರಾಂತಿ ಹಬ್ಬದ ದಿನ 5 ಹುಲಿಗಳು, ಒಟ್ಟು ಎರಡು ದಿನಕ್ಕೆ 13 ಹುಲಿಗಳು ನೇರವಾಗಿ ಸಿಕ್ಕಿದ್ದು ಹುಲಿ ಪ್ರಿಯರಲ್ಲಿ ಸಂತಸ ತಂದಿದೆ.
ಶನಿವಾರ ಬೆಳಿಗ್ಗೆ ಸಫಾರಿ ವೇಳೆಯಲ್ಲಿ ಕಡಮತ್ತೂರುಕಟ್ಟೆ ಬಳಿ ಒಂದು ಗಂಡು ಹುಲಿ ಸಿಕ್ಕಿದೆ. ಸಂಜೆ ಸಫಾರಿಯಲ್ಲಿ ಆನೆಕಟ್ಟೆ ಬಳಿ ಗಂಡು ಮತ್ತು ಹೆಣ್ಣು ಹುಲಿ ಜೊತೆಯಾಗಿ ಕಾಣಿಸಿದೆ. ಸಿದ್ದರಾಯಕಟ್ಟೆ ಬಳಿ ಒಂದು ಗಂಡು, ಮಿನಿಸ್ಟ್ರೀಗುತ್ತಿ ಬಳಿ ಕುಟುಂಬ ಸಮೇತವಾಗಿ ಒಟ್ಟು ತಾಯಿ ಸೇರಿದಂತೆ 4 ಹುಲಿಗಳ ದರ್ಶನವಾಗಿದೆ.

ಕಡಮತ್ತೂರುಕಟ್ಟೆ ಬಳಿ ಮಾದೇಶ ಎಂದು ಕರೆಯಲ್ಪಡುವ ಗಂಡು ಹುಲಿ, ಬಾರ್ಡರ್ ಭಾಗದಲ್ಲಿ ಮತ್ತೆರಡು ಹೆಣ್ಣು ಹುಲಿ ಕಂಡಿದೆ. ಸೊಳ್ಳೆಕಟ್ಟೆ ಬಳಿ 8ರಿಂದ 9 ತಿಂಗಳ ಹೆಣ್ಣು ಹುಲಿ, ಮಿನಿಸ್ಟ್ರೀಗುತ್ತಿ ಬಳಿ ಮತ್ತೊಂದು ಹುಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಕಾಣಿಸಿದೆ. ಒಟ್ಟಾರೆ ಇದೀಗ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿ ಸೇರಿದಂತೆ ಇತರೆ ವನ್ಯಪ್ರಾಣಿಗಳು ಕಾಣಿಸುತ್ತಿರುವುದು ಸಂತಸ ತಂದಿದೆ.












Click it and Unblock the Notifications