ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ #ಸೇವ್ ಬಂಡೀಪುರ, ಏನಿದು ಮತ್ತು ಯಾಕೆ?-ಮಾಹಿತಿ
ಬಂಡೀಪುರ, ಜನವರಿ, 31: #ಸೇವ್ ಬಂಡೀಪುರ ಎನ್ನುವ ಟ್ವೀಟ್‌ವೊಂದು ಇದೀಗ ಭಾರೀ ಟ್ರೆಂಡ್‌ನಲ್ಲಿದೆ. ಹಾಗಾದರೆ ಇದರ ಉದ್ದೇಶ ಏನು ಮತ್ತು ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
"ಹಳೆ ಮೈಸೂರು ಭಾಗಕ್ಕೆ ಬಂಡೀಪುರ ಮತ್ತು ನಾಗರಹೊಳೆ ಕಾಡುಗಳು ಎರಡು ಕಣ್ಣು ಇದ್ದಹಾಗೆ ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಕಾಡನ್ನು ನಾಶಪಡಿಸುವ ಎಲ್ಲಾ ಚಟುವಟಿಕೆಗಳು ನಿಲ್ಲಬೇಕು. ಕರ್ನಾಟಕ ಸರ್ಕಾರ ರೈಲು ಸಮೀಕ್ಷೆಗೆ ಅವಕಾಶ ನೀಡಬಾರದು ಮತ್ತು ಆ ಯೋಜನೆಗಳನ್ನು ತಿರಸ್ಕರಿಸಬೇಕು. ಹಾಗೂ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಮುಂದುವರೆಸಬೇಕು," ಎನ್ನುವ ಟ್ವೀಟ್‌ವೊಂದು ವೈರಲ್ ಆಗುತ್ತಿದೆ.

ಕೇರಳದ ನಿಲಂಬೂರು ಮತ್ತು ಕರ್ನಾಟಕದ ನಂಜನಗೂಡಿಗೆ ವಯನಾಡಿನ ಮೂಲಕ ರೈಲು ಸಂಪರ್ಕ ಕಲ್ಪಿಸುವ ನಿಲಂಬೂರು-ನಂಜನಗೂಡು ರೈಲ್ವೆ ಯೋಜನೆಗೆ ಅಂತಿಮ ವರದಿ ಸಿದ್ಧಪಡಿಸಲು ವೈಮಾನಿಕ ಸಮೀಕ್ಷೆ ಪೂರ್ಣಗೊಂಡ ಬೆನ್ನಲ್ಲೇ 'ಸೇವ್ ಬಂಡೀಪುರ' ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಕೇರಳ ಸರ್ಕಾರದ ಮನವಿಯಂತೆ ಕರ್ನಾಟಕವನ್ನು ಕೇರಳದೊಂದಿಗೆ ಸಂಪರ್ಕಿಸುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧದ ಸಂಭಾವ್ಯ ಸಡಿಲಿಕೆಯ ಸುಳಿವು ನೀಡಿದರು. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಅಭಿಯಾನಗಳನ್ನು ಪ್ರಾರಂಭಿಸಿದ ನಂತರ ವನ್ಯಜೀವಿ ಉತ್ಸಾಹಿಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
ರೈಲ್ವೇ ಮಾರ್ಗದ ವೈಮಾನಿಕ ಸಮೀಕ್ಷೆಯು ಪರಿಸರವಾದಿಗಳು ಮತ್ತು ವನ್ಯಜೀವಿ ಉತ್ಸಾಹಿಗಳಲ್ಲಿ ಕಳವಳವನ್ನು ಉಂಟುಮಾಡಿದೆ. ಈ ಬೆಳವಣಿಗೆಗಳಿಗೆ ಪ್ರತಿಯಾಗಿ 'ಸೇವ್ ಬಂಡೀಪುರ' ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ಆನ್ ಲೈನ್ ಅಭಿಯಾನವೊಂದು ಭಾರೀ ಸದ್ದು ಮಾಡುತ್ತಿದೆ.
ರಾತ್ರಿ ಸಂಚಾರ ನಿಷೇಧವನ್ನು ಮುಂದುವರೆಸುವಂತೆ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಮತ್ತು ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಸಂಚರಿಸಲು ಯೋಜಿಸಿರುವ ರೈಲ್ವೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ, ಬಹುತೇಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications