ಮಹದೇಶ್ವರಬೆಟ್ಟದ ಹಾಡಿ ನಿವಾಸಿಗಳ ಬದುಕು ಅರಣ್ಯ ರೋಧನ
ಚಾಮರಾಜನಗರ, ಜನವರಿ 28:ಇಲ್ಲಿ ಮಕ್ಕಳು ಬೆಟ್ಟಗುಡ್ಡದ ದುರ್ಗಮ ಹಾದಿಯಲ್ಲಿ ನಡೆದು ಶಾಲೆಗೆ ಹೋಗಬೇಕು... ಯಾರಿಗಾದರೂ ಕಾಯಿಲೆ ಬಂದರೆ ರಸ್ತೆಯಿಲ್ಲದ ಕಾರಣ ವಾಹನ ಬರುವುದಿಲ್ಲ ಹೀಗಾಗಿ ಅವರನ್ನು ಹೊತ್ತು ಸಾಗಬೇಕು.. ಇನ್ನು ಇಲ್ಲಿನ ಜನ ಆದಿಮಾನವರಂತೆ ಸೌಲಭ್ಯ ವಂಚಿತರಾಗಿ ಬದುಕುತ್ತಿದ್ದಾರೆ..
ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ತಪೋಭೂಮಿಯ ಸಮೀಪವಿರುವ ಕರ್ನಾಟಕ ತಮಿಳುನಾಡು ಗಡಿಯ ದೊಡ್ಡಾಣೆ ಗ್ರಾಮದ ಹಾಡಿಯಲ್ಲಿನ ನಿವಾಸಿಗಳ ಬದುಕು ಇದು. ಕಾಡು ಪ್ರಾಣಿಗಳ ಕಾಟದ ಜೊತೆಗೆ ದುರ್ಗಮ ಅರಣ್ಯದಲ್ಲೇ ನಡೆದು ಸಾಗಬೇಕು ಶಾಲಾ ಮಕ್ಕಳು, ಕಲ್ಲು ಮುಳ್ಳು ಹಾಗೂ ವನ್ಯ ಪ್ರಾಣಿಗಳ ಭೀತಿಯಂದ ಸಾಗಬೇಕು, ಅಲ್ಲದೇ ಇಲ್ಲಿನ ರೋಗಿಗಳಿಗೆ ಡೋಲಿಯೇ ಆಂಬುಲೆನ್ಸ್ ಎಂದರೂ ತಪ್ಪಾಗಲಾರದು.
ಸ್ವಾತಂತ್ರ್ಯ ಬಂದು 72 ವರ್ಷವಾದರೂ ಇವರತ್ತ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲಿ ಗಮನ ಹರಿಸದೇ ಇರುವುದರಿಂದಾಗಿ ಅವರು ಇನ್ನೂ ಕೂಡ ಆದಿ ಮಾನವರಂತೆಯೇ ಬದುಕುವಂತಾಗಿದೆ.

ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ದೊಡ್ಡಾಣೆ ಹಾಡಿಯಲ್ಲಿ ಸುಮಾರು 30 ಮಕ್ಕಳು ಗೋಪಿನಾಥಂ ಶಾಲೆಯಲ್ಲಿ ವ್ಯಾಸಂಗ ಮಾಡ್ತಾ ಇದ್ದಾರೆ. ಇವರು ಶಾಲೆಗೆ ಹೋಗಬೇಕಾದರೆ ದುರ್ಗಮ ಅರಣ್ಯದೊಳಗೆ ನಡೆದುಕೊಂಡೇ ಸಾಗಬೇಕು. ಅದು ಕಾಡುಪ್ರಾಣಿಗಳ ಕಾಟದ ನಡುವೆ.
ಅದೂ ಅಲ್ಲದೆ ದೊಡ್ಡಾಣೆ ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಡೊಲಿಯೇ ಗತಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿಯಂತಿದೆ ಹಾಡಿ ಜನರ ಪರಿಸ್ಥಿತಿ. ಬಹಳಷ್ಟು ಸಲ ಅನಾರೋಗ್ಯ ವ್ಯಕ್ತಿಗಳು ಮಾರ್ಗದ ಮಧ್ಯೆ ಸಾವನ್ನಪ್ಪಿದ ಘಟನೆಗಳು ನಡೆದಿವೆ.

ಇನ್ನು ಕಲ್ಲು ಬಂಡೆಗಳ ನಡುವೆ ಹಾದು ಬರುವಾಗ ಎಚ್ಚರ ತಪ್ಪಿದರೆ ಸಾವು ಖಚಿತ. ಹನೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್. ನರೇಂದ್ರ ಮೂರು ಬಾರಿ ಸತತವಾಗಿ ಚುನಾಯಿತರಾಗಿದ್ದರೂ ಕೂಡ ದೊಡ್ಡಾಣೆಯಂತಹ ಕುಗ್ರಾಮಗಳಿಗೆ ಮೂಲ ಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗದೇ ಇರುವುದು ಬೇಸರದ ಸಂಗತಿಯಾಗಿದೆ.
ಇನ್ನು ಮುಂದೆಯಾದರೂ ಇತ್ತ ಸಂಬಂಧಿಸಿದವರು ಗಮನಹರಿಸಿ ಇಲ್ಲಿನ ಹಾಡಿಯ ಜನಕ್ಕೆ ಒಂದೊಳ್ಳೆಯ ಬದುಕನ್ನು ಕಟ್ಟಿಕೊಡಬೇಕಿದೆ.












Click it and Unblock the Notifications