ಹನೂರು: ಇಂಡಿಗನತ್ತದಲ್ಲಿ ಮರು ಮತದಾನ: ಚುನಾವಣಾ ಆಯೋಗ ಘೋಷಣೆ
ಚಾಮರಾಜನಗರ, ಏಪ್ರಿಲ್, 27: ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಇನ್ನು ಈ ವೇಳೆ ಚಾಮರಾಜನಗರ ಕ್ಷೇತ್ರಕ್ಕೆ ಒಳಪಡುವ ಇಂಡಿಗನತ್ತ ಗ್ರಾಮದಲ್ಲಿ ಜನರು ಮತಗಟ್ಟೆಯನ್ನು ಧ್ವಂಸ ಮಾಡಿದ ಘಟನೆ ನಡೆದಿತ್ತು. ಈ ಸಂಬಂಧ ಚುನಾವಣಾ ಆಯೋಗ ಮಹತ್ವದ ನಿರ್ಧಾರಕ್ಕೆ ಬಂದಿದೆ. ಹಾಗಾದರೆ ಮಾಹಿತಿ ಇಲ್ಲಿದೆ ಗಮನಿಸಿ.
ಶುಕ್ರವಾರ (ಏಪ್ರಿಲ್ 27) ಮತದಾನ ಬಹಿಷ್ಕಾರ ನಡೆಸಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಮತಗಟ್ಟೆ ಧ್ವಂಸ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮರು ಚುನಾವಣೆ ಮಾಡುವುದಾಗಿ ಘೋಷಣೆ ಮಾಡಿದೆ. ಏಪ್ರಿಲ್ 29ರ ಸೋಮವಾರದಂದು ಬೆಳಗ್ಗೆ 7ರಿಂದ ಸಂಜೆವರೆಗೆ 146ರ ಮತಗಟ್ಟೆಯಲ್ಲಿ ಮರು ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.

ಶುಕ್ರವಾರದಂದು ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮತದಾನಕ್ಕೆ ಅಡ್ಡಿಪಡಿಸಿ, ಮತಯಂತ್ರಗಳನ್ನು ಕೆಲವರು ಹಾನಿ ಮಾಡಿದ್ದರು. ಈ ಸಂಬಂಧ, ಹನೂರು ತಹಶಿಲ್ದಾರ್ ಹಾಗೂ ಚುನಾವಣಾ ಅಧಿಕಾರಿ ಪ್ರತ್ಯೇಕ ದೂರು ಕೊಟ್ಟಿದ್ದರು.
ಇನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸರು 25ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಹಲವರು ಗ್ರಾಮ ತೊರೆದು ಪರಾರಿಯಾಗಿದ್ದಾರೆ. ಮೆಂದಾರೆ ಗ್ರಾಮಕ್ಕೆ ಪೊಲೀಸರು ತೆರಳಿ ಮತದಾನ ಮಾಡುವಂತೆ ಇಂದು ಧೈರ್ಯ ತುಂಬಿದ್ದಾರೆ.
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ: ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು ಇದೀಗ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಇಂದು (ಏಪ್ರಿಲ್ 26) ರಾಜ್ಯದ 14 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಸಹ ಮಾಡಲಾಗಿದೆ. ಇದರ ನಡುವೆಯೇ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ ಘಟನೆ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಮೂಲಸೌಕರ್ಯಕ್ಕೆ ಆಗ್ರಹಿಸಿ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ 5 ಗ್ರಾಮಗಳ ಜನರು ಮತದಾನ ಬಹಿಷ್ಕಾರ ಮಾಡಿದ್ದರು. ಬಳಿಕ ಅಧಿಕಾರಿಗಳು ಮನವೊಲಿಕೆಗೆ ತೆರಳಿದ್ದ ವೇಳೆ ತಾವು ಮತದಾನ ಮಾಡಲ್ಲವೆಂದು ಗ್ರಾಮಸ್ಥರೆಲ್ಲ ಸೇರಿ ಮತಗಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ, ಮತಗಟ್ಟೆಯ ಬಾಗಿಲು, ಮೇಜು- ಕುರ್ಚಿ, ಇವಿಎಂ ಯಂತ್ರ ಇತರೆ ಪರಿಕರಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚುವ ಯತ್ನ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications