ಹಿಂದಿ ದಿವಸ್ ಆಚರಣೆ: ಗುಂಡ್ಲುಪೇಟೆಯಲ್ಲಿ ರೊಚ್ಚಿಗೆದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು
ಚಾಮರಾಜನಗರ, ಸೆಪ್ಟೆಂಬರ್, 14: ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದನ್ನು ವಿರೋಧಿಸಿ ಇದೀಗ ರಾಜ್ಯದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಹಾಗೆಯೇ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದಲ್ಲಿ ಇಂದು (ಸೆಪ್ಟೆಂಬರ್ 14) ಪ್ರತಿಭಟನೆ ನಡೆಸಿದರು.
ಐಬಿ ವೃತ್ತದಿಂದ ಸಾರಿಗೆ ಬಸ್ ನಿಲ್ದಾಣದವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು. ಬಳಿಕ ಹಳೇ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುವ ನಡೆ ಸರಿಯಲ್ಲ. ಭಾರತ ಎಂದರೆ ಅನೇಕ ಭಾಷೆಗಳು, ಸಾಂಸ್ಕೃತಿಕ ಹಿನ್ನೆಲೆ, ಆಚಾರ ವಿಚಾರ ಒಳಗೊಂಡಿದ್ದು, ಹಿಂದಿ ಭಾಷಿಕರ ದೇಶವಲ್ಲ. ಕನ್ನಡಿಗರ ಮೇಲೆ, ತಮಿಳರು, ಮಲೆಯಾಳಿಗಳು, ತೆಲುಗು ಭಾಷಿಕರ ಮೇಲೆ ಉತ್ತರ ಭಾರತದ ಕೆಲವೇ ರಾಜ್ಯಗಳಲ್ಲಿ ಮಾತನಾಡುವ ಹಿಂದಿ ಭಾಷೆಯನ್ನು ಬಲವಂತವಾಗಿ ನಮ್ಮ ಮೇಲೆ ಹೇರಿಕೆ ಮಾಡುವ ಮೂಲಕ ದಬ್ಬಾಳಿಕೆ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ನಮ್ಮ ಮೇಲೆ ಪ್ರತಿ ಹಂತದಲ್ಲಿಯೂ ಹಿಂದಿ ಹೇರುವ ಮೂಲಕ ಒತ್ತಡ ಹೇರುತ್ತಿದೆ. ಹಿಂದಿ ಬಾರದವರಿಗೆ ಕೇಂದ್ರ ಸರ್ಕಾರದ ನೌಕರಿಗಳಲ್ಲಿ ಕಡೆಗಣಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಆಯಾ ಸ್ಥಳೀಯ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕನ್ನಡ ಭಾಷೆಗೆ ಮೊದಲ ಆದ್ಯತೆ: ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತೀಯರು ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ್ದರು. ಈ ಮೂಲಕ ಸರ್ಕಾರ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕನ್ನಡದ ಬದಲಿಗೆ ಹೆಚ್ಚಾಗಿ ಹಿಂದಿಯನ್ನು ಬಳಸುತ್ತಿರುವುದೇ ಈ ವಿರೋಧಕ್ಕೆ ಕಾರಣವಾಗಿತ್ತು.
ಆದರೆ ಕನ್ನಡ ಭಾಷೆಯು ಕನ್ನಡಗರಿಗೆ ಮೊದಲ ಆದ್ಯತೆ ಆಗಬೇಕೇ ಹೊರತೂ ಆಯ್ಕೆ ಆಗಿರಬಾರದು. ಸಂದರ್ಭಕ್ಕೆ ತಕ್ಕಂತೆ ಅವಶ್ಯಕತೆಯಿದ್ದರೆ ಕನ್ನಡದೊಂದಿಗೆ ಬೇರೆ ಭಾಷೆಯನ್ನು ಬಳಕೆ ಮಾಡಲಿ. ಬಹುತೇಕ ಸಂದರ್ಭದಲ್ಲಿ ಕನ್ನಡವನ್ನೇ ಬಳಸುವ ಮೂಲಕ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂಬುದೇ ಕನ್ನಡಿಗರ ಆಗ್ರಹವಾಗಿದೆ.
1918ರಲ್ಲಿ, ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಪ್ರಚಾರ ಮಾಡಲು ಹಿಂದಿ ವಿದ್ವಾಂಸರು ಮತ್ತು ಕಾರ್ಯಕರ್ತರಿಂದ ಹಿಂದಿ ಸಾಹಿತ್ಯ ಸಮ್ಮೇಳನವನ್ನು ರಚಿಸಲಾಯಿತು. 1947ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆದ ಬಳಿಕ ಹಿಂದಿಯನ್ನು ದೇಶದ ಏಕೈಕ ಅಧಿಕೃತ ಭಾಷೆಯನ್ನಾಗಿ ಮಾಡಲು ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಾಲೇಲ್ಕರ್, ಮೈಥಿಲಿ ಶರಣ್ ಗುಪ್ತ್ ಮತ್ತು ಸೇಠ್ ಗೋವಿಂದ್ ದಾಸ್ ಅವರೊಂದಿಗೆ ರಾಜೇಂದ್ರ ಸಿಂಹ ಪ್ರಮುಖ ವ್ಯಕ್ತಿಗಳು ಒಟ್ಟುಗೂಡಿದರು.
ಆದ್ಸೆದರಿಂದ ಪ್ಟೆಂಬರ್ 14, 1949ರಂದು, ದೇವನಾಗರಿ ಲಿಪಿಯಲ್ಲಿ ಬರೆದ ಹಿಂದಿಯನ್ನು ಭಾರತದ ಸಂವಿಧಾನ ಸಭೆಯು ದೇಶದ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಅಂಗೀಕರಿಸಿತು. ಅಂದಿನಿಂದ ಪ್ರತಿ ವರ್ಷ ರಾಷ್ಟ್ರೀಯ ಹಿಂದಿ ದಿವಸನ್ನು ಆಚರಿಸುತ್ತ ಬರಲಾಗುತ್ತಿದೆ.
ಭಾರತದಲ್ಲಿ ವ್ಯಾಪಕವಾಗಿ ಮಾತನಾಡುವ ಹಿಂದಿ ಭಾಷೆಯ ಇತಿಹಾಸವನ್ನು ಉತ್ತೇಜಿಸುವುದು ಹಾಗೂ ಹಿಂದಿಯ ಶ್ರೀಮಂತ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಸ್ತಾರದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. ಈ ಹಿನ್ನೆಲೆ ಶಾಲಾ -ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳು ಸೇರಿದಂತೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಪ್ರತಿ ವರ್ಷವೂ ಕೇಂದ್ರ ಸರ್ಕಾರದ ಹಲವು ಇಲಾಖೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಒಳಗೊಂಡಂತೆ ಸಾಧನೆ ಮಾಡಿದ ಇಬ್ಬರೂ ವ್ಯಕ್ತಿಗಳಿಗೆ 'ರಾಜಭಾಷಾ ಕೀರ್ತಿ ಪುರಸ್ಕಾರ' ಮತ್ತು ರಾಜಭಾಷಾ ಗೌರವ್ ಪುರಸ್ಕಾರ ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ.












Click it and Unblock the Notifications