ಮತಾಂತರ ನಿಷೇಧ ಕಾಯ್ದೆ ವಾಪಸ್: ಚಾಮರಾಜನಗರದಲ್ಲಿ ಕಾಂಗ್ರೆಸ್ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಚಾಮರಾಜನಗರ, ಜೂನ್, 17: ಮತಾಂತರ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ಸಿದ್ದರಾಮಯ್ಯ ಸರ್ಕಾರದ ನಡೆ ಖಂಡಿಸಿ ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿವೆ.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಚಾಮರಾಜನಗರ ಜಿಲ್ಲಾಡಳಿತ ಭವನ ಮುಂಭಾಗ ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಅನ್ಯಧರ್ಮಿಯರು ಮತ ಹಾಕಿಲ್ಲ, ಹಿಂದೂಗಳು ಮತ ಹಾಕಿದ್ದಾರೆ. ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆದಿರುವುದು ಹಿಂದೂ ಸಮಾಜಕ್ಕೆ ಎಸಗಿದ ದ್ರೋಹ ಆಹಿದೆ. ಆಮಿಷ, ಮರಳು ಮಾಡಿ ಮತಾಂತರ ಮಾಡುವುದಕ್ಕೆ ನಮ್ಮ ವಿರೋಧವಿದ್ದು, ಕಾಯ್ದೆ ಇದ್ದರಷ್ಟೇ ಇದಕ್ಕೆ ಕಡಿವಾಣ ಬೀಳಲಿದೆ. ಆದ್ದರಿಂದ ಸರ್ಕಾರದ ನಿರ್ಧಾರವನ್ನು ನಾವು ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೊಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ವಿಎಚ್‌ಪಿ ಮುಖಂಡದ ಆಕ್ರೋಶ
ಅದೇ ರೀತಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಗೆ ಎಳ್ಳು, ನೀರು ಬಿಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಹಿಂದೂ ಸಂಘಟನೆಗಳು, ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಪಂಪ್ವೆಲ್, ಶಿವಾನಂದ ಮೆಂಡನ್ ಇದಕ್ಕ ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ವಿರೋಧ ವ್ಯಕ್ತಪಡಿಸಿದ್ದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸರ್ಕಾರದ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ ಎಂದಿದ್ದರು.

ಹಾಗೆಯೇ ಮತಾಂತರ ಎಂಬದು ಒಂದು ಸಾಮಾಜಿಕ ಪಿಡುಗು. ಇದು ಸಮಾಜದ ಅವನತಿಗೆ ಕಾರಣವಾಗಬಲ್ಲದು ಎನ್ನುವ ಸದುದ್ಧೇಶದಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಬಲವಂತದ ಮತಾಂತರ ನಿಷೇಧಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಈಗ ಆಮಿಷಗಳನ್ನೊಡ್ಡಿ, ಬೆದರಿಸಿ ಮತಾಂತರ ಮಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ರದ್ದುಪಡಿಸುವ ನಿರ್ಧಾರದ ಮೂಲಕ ಕಾಂಗ್ರೆಸ್ ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದೆ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಮುಕ್ತವಾಗಿ ಮತಾಂತರಗೊಳಿಸಲು ಸಮಾಜ ವಿದ್ರೋಹಿಗಳಿಗೆ ಕಾಂಗ್ರೆಸ್ ಆಹ್ವಾನ ನೀಡುತ್ತಿದೆಯೇ.? ಎಂದು ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.ಹಾಗೆಯೇ ಬಲವಂತದಿಂದಮತಾಂತರ ಮಾಡುವವರಿಗೆ ಕಾನೂನಿನಡಿಯಲ್ಲಿ ಶಿಕ್ಷೆಗೊಳಪಡಿಸುವ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ರಾಜ್ಯದಲ್ಲಿ ಮತಾಂತರಿಗಳ ಅಟ್ಟಹಾಸಕ್ಕೆ ರತ್ನ ಕಂಬಳಿ ಹಾಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಿರಂತರವಾಗಿ ಹಿಂದೂ ಸಮಾಜವನ್ನು ಒಡೆಯುವ ಕೃತ್ಯವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಆರೋಪಿಸಿದ್ದರು.
ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ಸು ಪಡೆಯುವ ತನ್ನ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಇಡೀ ಹಿಂದೂ ಸಮಾಜ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದರು.
ಇನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಮಾತನಾಡಿ, ಹಿಂದುತ್ವದ ಮೇಲೆ ಸದಾ ಕೆಂಡ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಲು ಮುಂದಾಗಿದ್ದಾರೆ. ಈ ಮೂಲಕ ಪರೋಕ್ಷ ಸಮರ ಸಾರಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಂದೋಲದ ಮಾದರಿ ಹೋರಾಟ ನಡೆಸಿ, ಹಿಂದುತ್ವದ ಉಳಿವಿಗಾಗಿ ಠಕ್ಕರ್ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದರು.












Click it and Unblock the Notifications