ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲ ಅರೆಸ್ಟ್
ಚಾಮರಾಜನಗರ, ಫೆಬ್ರವರಿ 03:ವಸತಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ. ಹನೂರು ತಾಲೂಕಿನ ಮಂಗಲ ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್ ಪೊಲೀಸರ ಅತಿಥಿಯಾಗಿದ್ದಾನೆ.
ಈತನ ವಿರುದ್ಧ ವಸತಿ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಹರೀಶ್‌ಕುಮಾರ್ ನಿರ್ದೇಶನದ ಮೇರೆಗೆ ಹನೂರು ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ದೂರು ದಾಖಲಿಸಿದ್ದು ಅದರಂತೆ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಶಾಲಾ ವತಿಯಿಂದ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಬಸ್ ವ್ಯವಸ್ಥೆಯನ್ನು ಮಾಡಿದ್ದರೂ ಕೂಡ ಪ್ರಾಂಶುಪಾಲ ಲೋಕೇಶ್ ವಿದ್ಯಾರ್ಥಿನಿಯರಿದ್ದ ವಾಹನದಲ್ಲೇ ಪ್ರಯಾಣಿಸಿದ್ದಲ್ಲದೆ, ಕೆಲವು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ.

ಪ್ರವಾಸದ ವೇಳೆ ಇಬ್ಬರು ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲ ಲೋಕೇಶ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಪೋಷಕರು ಮತ್ತು ಉಪನ್ಯಾಸಕಿಯರಿಗೆ ತಿಳಿಸಿದ್ದಲ್ಲದೆ, ಪತ್ರದ ಮುಖೇನ ಅಧಿಕಾರಿಗಳಿಗೆ ದೂರು ನೀಡಿದ್ದರು. ಇನ್ನು ಉಪನ್ಯಾಸಕಿಯರು ಕೂಡ ಪ್ರಾಂಶುಪಾಲರ ವರ್ತನೆಯಿಂದ ಬೇಸತ್ತು ಅವರ ವಿರುದ್ಧ ಮಾತನಾಡಲಾಗದೆ ಅಸಹಾಯಕರಾಗಿ ಕುಳಿತಿದ್ದರು ಎನ್ನಲಾಗಿದೆ.
ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಅವರ ಹೇಳಿಕೆಗಳು ಹಾಗೂ ದಾಖಲೆಗಳನ್ನು ಅಧಿಕಾರಿಗಳು ಬಹಿರಂಗಪಡಿದೆ ಗೌಪ್ಯವಾಗಿಟ್ಟಿದ್ದಾರೆ. ಇನ್ನು ಪೂರ್ವ ನಿಯೋಜಿತವಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ಪ್ರಾಂಶುಪಾಲ ಲೋಕೇಶ್‌ನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದಾಗ ಆತ ಹೈಡ್ರಾಮವನ್ನೇ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸ್ ಠಾಣೆಯಲ್ಲಿಯೇ ಪೊಲೀಸರ ವಿರುದ್ಧವೇ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ವಿರುದ್ಧ ರಂಪಾಟ ನಡೆಸಿದ್ದು, ಠಾಣೆಯ ಟೇಬಲ್ ಮೇಲೆ ಇಡಲಾಗಿದ್ದ ಗಾಜನ್ನು ಕೈ ಹಾಗೂ ತಲೆಯಿಂದ ಗುದ್ದಿಕೊಂಡು ಹೈಡ್ರಾಮ ನಡೆಸಿದ್ದಾನೆ ಎನ್ನಲಾಗಿದೆ.












Click it and Unblock the Notifications