ವಿದ್ಯುತ್ ಬಿಲ್ ಬಾಕಿ: ಕತ್ತಲಲ್ಲಿ ಐತಿಹಾಸಿಕ ಚಾಮರಾಜೇಶ್ವರ ದೇಗುಲ
ಚಾಮರಾಜನಗರ ನವೆಂಬರ್4: ವಿದ್ಯುತ್ ಬಿಲ್ ಪಾವತಿಯಾಗದಿದ್ದರಿಂದ ಐತಿಹಾಸಿಕ ಹಾಗೂ ಚಾಮರಾಜನಗರದ ಆರಾಧ್ಯ ದೈವ ಚಾಮರಾಜೇಶ್ವರನಿಗೆ ಗುರುವಾರ ಕತ್ತಲಲ್ಲಿ ಪೂಜೆ ಸಲ್ಲಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಹೃದಯಭಾಗದಲ್ಲಿರುವ ಚಾಮರಾಜೇಶ್ವರ ದೇಗುಲದ ವಿದ್ಯುತ್ ಬಿಲ್ ಅನ್ನು ಮುಜರಾಯಿ ಇಲಾಖೆಯು ಬಾಕಿ ಉಳಿಸಿಕೊಂಡಿರುವುದರಿಂದ ಸೆಸ್ಕ್ ಸಿಬ್ಬಂದಿ ದೇಗುಲದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಹೀಗಾಗಿ ದೇವಾಯದಲ್ಲಿ ಕತ್ತಲು ಆವರಿಸಿದೆ. ಭಕ್ತರು ಬ್ಯಾಟರಿ ಬೆಳಕಿನಲ್ಲೇ ದೇವರ ಪ್ರದಕ್ಷಿಣೆ ಬಂದು ದೇವರ ದರ್ಶನ ಮಾಡಿದ್ದಾರೆ. ಕಾರ್ತಿಕ ಮಾಸವಾಗಿರುವುದರಿಂದ ಶಿವನ ಭಕ್ತರು ಅದರಲ್ಲೂ ಮಹಿಳೆಯರು ಚಾಮರಾಜೇಶ್ವರನ ದರ್ಶನ ಮಾಡಲು ತಂಡೋಪಾದಿಯಲ್ಲಿ ಆಗಮಿಸುತ್ತಿದ್ದರು.

ದೇವಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಅಧಿಕಾರಿಗಳು
ಈ ಬಾರಿ ಕಾರ್ತಿಕ ಮಾಸದಲ್ಲಿ ಚಾಮರಾಜೇಶ್ವರನ ದರ್ಶನಕ್ಕೆ ವಿಘ್ನ ಬಂದಿರುವುದಕ್ಕೆ ದೂರದ ಊರಿನಿಂದ ಬಂದ ನೂರಾರು ಭಕ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಾಮರಾಜೇಶ್ವರ ದೇವಾಲಯದಲ್ಲಿ ವಿದ್ಯುತ್ ಇಲ್ಲದಿರುವುದರಿಂದ ಮಹಿಳೆಯರು ದೇಗುಲದ ಹೊರಗೆ ಕೈ ಮುಗಿದು ಜಿಲ್ಲಾಡಳಿತದ ವಿರುದ್ಧ ಶಪಿಸುತ್ತಾ ಹೊರನಡೆದಿದ್ದಾರೆ. ಈ ಹಿಂದೆಯೂ ವಿದ್ಯುತ್ ಕಡಿತಗೊಳಿಸಲು ಮುಂದಾದ ವೇಳೆ 15 ದಿನ ಕಾಲಾವಕಾಶ ಪಡೆದು ವಿದ್ಯುತ್ ಪಾವತಿ ಮಾಡಲಾಗಿತ್ತು. ಆದರೆ, ನಿನ್ನೆ(ನವೆಂಬರ್3)ರ ಸಂಜೆ 5 ರ ಹೊತ್ತಿಗೆ ವಿದ್ಯುತ್ ಕಡಿತ ಮಾಡಿದ್ದು 60-70 ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ತಿಳಿದುಬಂದಿದೆ.

ಬ್ಯಾಟರಿ ಬೆಳಕಿನಲ್ಲೇ ದೇವರ ದರ್ಶನ ಪಡೆದ ಭಕ್ತಾಧಿಗಳು
ಐತಿಹಾಸಿಕ ದೇವಾಲಯ ಹಾಗೂ ಸಹಸ್ರಾರು ಭಕ್ತರ ಶ್ರದ್ಧಾ- ಭಕ್ತಿಯಿಂದ ಭೇಟಿ ಕೊಡುವ ಸ್ಥಳಕ್ಕೆ ಅಧಿಕಾರಿಗಳು ಈ ರೀತಿ ವರ್ತನೆ ತೋರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 40 ವರ್ಷಗಳಿಂದ ದೇವಾಲಯದಲ್ಲಿ ಕೆಲಸ ಮಾಡಿಕೊಂಡಿದ್ದು ಇದೇ ಮೊದಲ ಬಾರಿಗೆ ಹೀಗೆ ಕತ್ತಲಲ್ಲಿ ದೇವರಿರುವುದು ಎಂದು ದೇಗುಲದ ನೌಕರ ಮಹಾದೇವಶೆಟ್ಟಿ ಬೇಸರ ಹೊರಹಾಕಿದ್ದಾರೆ. ಇನ್ನು ಅನೇಕ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡದೆ ಹಾಗೇ ವಾಪಸ್ ಆಗಬಾರದು ಎನ್ನುವ ಕಾರಣದಿಂದ ಬ್ಯಾಟರಿ ಬೆಳಕಿನಲ್ಲೇ ದೇವರ ಪ್ರದಕ್ಷಿಣೆ ಬಂದು ದೇವರ ದರ್ಶನ ಮಾಡಿದ್ದಾರೆ.

ದೇಗುಲಕ್ಕೆ ವಿದ್ಯುತ್ ಸಂಪರ್ಕ ಮತ್ತೆ ಬರಲಿ ಎನ್ನುವುದು ಭಕ್ತರ ಆಗ್ರಹ
ಇನ್ನು ದೇವಾಲಯಕ್ಕೆ ಸೇರಿರುವ ಅಂಗಡಿಗಳಲ್ಲಿ ಬಾಡಿಗೆ ಪಡೆದು ಬೇಕಾದರೆ ವಿದ್ಯುತ್ ಬಿಲ್ ಕಟ್ಟಲಿ, ಬ್ಯಾಟರಿ ಹಿಡಿದುಕೊಂಡು ದೇವರ ದರ್ಶನ ಮಾಡುವ ದುಸ್ಥಿತಿ ಬೇಕೆ..? ಕತ್ತಲು ಆವರಿಸಿರುವುದರಿಂದ ನೂರಾರು ಮಹಿಳೆಯರು ದೇಗುಲಕ್ಕೆ ಒಳಗೆ ಬರದೆ ದೇವಾಲಯದ ಹೊರಗೆ ಕೈ ಮುಗಿದು ಹೊರ ಹೋಗಿದ್ದಾರೆ ಎಂದು ಭಕ್ತರಾದ ಮಹಾದೇವ್ ಆಕ್ರೋಶ ಹೊರಹಾಕಿದ್ದಾರೆ. ಚಾಮರಾಜನಗರ ಜನರ ಬದುಕಿಗೆ, ನಂಬಿಕೆಗೆ ಬೆಳಕಾಗಿರುವ ಚಾಮರಾಜೇಶ್ವರನನ್ನೇ ಕತ್ತಲಲ್ಲಿ ಕೂರಿಸಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಹೀಗಾಗಿ ಆದಷ್ಟು ಬೇಗ ದೇಗುಲಕ್ಕೆ ವಿದ್ಯುತ್ ಸಂಪರ್ಕ ಮತ್ತೆ ಬರಲಿ ಎನ್ನುವುದು ಭಕ್ತರ ಒತ್ತಾಯವಾಗಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ
ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಗುರುವಾರ ಹುಂಡಿಗಳ ಎಣಿಕೆ ನಡೆದಿದ್ದು ಎರಡೂವರೆ ಕೋಟಿ ರೂಪಾಯಿ ಸಂಗ್ರಹವಾಗಿದೆ.

ಮಹದೇಶ್ವರನಿಗೆ 122 ಗ್ರಾಂ ಚಿನ್ನ ಅರ್ಪಣೆ
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೊಲೀಸರ ಬಂದೋಬಸ್ತ್‌ನಲ್ಲಿ ಎಣಿಕೆ ಕಾರ್ಯ ನಡೆಸಲಾಗಿದೆ. ಈ ಬಾರಿ ಮಹಾನವಮಿ ಆಯುಧಪೂಜೆ, ವಿಜಯದಶಮಿ, ದೀಪಾವಳಿ ಜಾತ್ರಾ ಮಹೋತ್ಸವ ಸೇರಿದಂತೆ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ ಪರಿಣಾಮ ಕಳೆದ 36 ದಿನಗಳ ಅವಧಿಯಲ್ಲಿ 2,50,85 ,794 ರೂಪಾಯಿ ಸಂಗ್ರಹವಾಗಿದೆ. ಇನ್ನು, 122 ಗ್ರಾಂ ಚಿನ್ನ ಹಾಗೂ 2.710 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.












Click it and Unblock the Notifications