• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಾಥ ಶವಗಳಿಗೆ ಮುಕ್ತಿದಾತ ಚಾಮರಾಜನಗರದ ಈ ಪೊಲೀಸ್‌ ಅಧಿಕಾರಿ

By Coovercolly Indresh
|

ಚಾಮರಾಜನಗರ, ಮೇ 09: ಪೊಲೀಸರೆಂದರೆ ಅಧಿಕಾರದ ದರ್ಪ ಮೆರೆಯುವವರು ಮತ್ತು ಒರಟಾಗಿ ವರ್ತಿಸುವವರು ಎಂದೇ ಥಟ್ಟನೆ ಜನರಲ್ಲಿ ಚಿತ್ರಣ ಮೂಡುತ್ತದೆ. ಆದರೆ ಪೊಲೀಸ್‌ ವೃತ್ತಿ ನಿಜಕ್ಕೂ ಒಂದು ಸವಾಲಿನ ಕೆಲಸ. ತಮ್ಮ ವೃತ್ತಿಯೊಂದಿಗೆ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಾವಿರಾರು ಪೊಲೀಸರೂ ನಮ್ಮ ನಡುವೆ ಇದ್ದಾರೆ.

ಆದರೆ ಪೊಲೀಸರ ಅಕ್ರಮ, ದರ್ಪದ ಪ್ರಕರಣಗಳಿಗೆ ಸಿಗುತ್ತಿರುವ ಪ್ರಚಾರ ಅವರ ಉತ್ತಮ ಕಾರ್ಯಗಳಿಗೆ ಸಿಗುತ್ತಿಲ್ಲ ಅನ್ನುವುದು ವಿಷಾದನೀಯ. ಹೀಗೆ ತಮ್ಮ ಅಧಿಕಾರದಿಂದಲ್ಲದೇ ತಮ್ಮ ಮಾನವೀಯ ಗುಣಗಳಿಂದ ಗುರುತಿಸಿಕೊಂಡಿರುವ ಪೊಲೀಸ್ ಅಧಿಕಾರಿಯೊಬ್ಬರು ಇದ್ದಾರೆ. ಅವರೇ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಾದೇಗೌಡ.

ದುರಂತ ಸಾವಿನ ಶವಗಳ ಆಪತ್ಭಾಂಧವ ಹಸನಬ್ಬ ನಿಧನ

 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಾದೇಗೌಡ

31 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಾದೇಗೌಡ

ಚಾಮರಾಜನಗರದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಸಹಾಯಕ ಸಬ್‌ ಇನ್ಸ್‌ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಎಚ್‌.ಬಿ ಮಾದೇಗೌಡ ಅವರು ತಮ್ಮ ಮಾನವೀಯ ಕೆಲಸಗಳಿಂದಲೇ ಗುರುತಿಸಿಕೊಂಡವರು. ಸುಮಾರು 31 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿದ್ದರೂ ಇವರ ಸಮಾಜ ಸೇವೆಗೆ ಕರ್ತವ್ಯ ಎಂದೂ ಅಡ್ಡಿಯಾಗಿಲ್ಲ.

 ಅನಾಥ ಶವಗಳಿಗೆ ಮುಕ್ತಿ ಕಾಣಿಸುವ ಅಧಿಕಾರಿ

ಅನಾಥ ಶವಗಳಿಗೆ ಮುಕ್ತಿ ಕಾಣಿಸುವ ಅಧಿಕಾರಿ

ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದರಿಂದ ದಿನನಿತ್ಯ ಹಲವು ಪ್ರಕರಣಗಳು ಇವರ ಕಣ್ಣ ಮುಂದೆ ಬರುತ್ತವೆ. ಅದರಲ್ಲಿ ಕೆಲವೊಂದು ಪ್ರಕರಣಗಳಲ್ಲಿ, ವಾರಸುದಾರರಿಲ್ಲದೇ ಶವಗಳು ಅನಾಥವಾಗಿರುತ್ತವೆ. ಅಂಥ ಶವಗಳಿಗೆ ಮುಕ್ತ ಕಾಣುವ ಕೆಲಸವನ್ನು ಮಾದೇಗೌಡ ಅವರು ಮಾಡುತ್ತಾ ಬಂದಿದ್ದಾರೆ. ಕಳೆದ ಮೂರು ದಶಕಗಳಿಂದ ಇವರು ಸುಮಾರು 80ಕ್ಕೂ ಹೆಚ್ಚು ಅನಾಥ ಶವಗಳಿಗೆ ಮುಕ್ತಿ ಕಾಣಿಸಿದ್ದಾರೆ.

ಯಶವಂತಪುರದಲ್ಲಿ ಪವಾಡ: ಹಸುಗೂಸಿನ ಪಾಲಿಗೆ ಆಟೋ ಡ್ರೈವರ್ ಹೀರೋ!

 ಮುಂದಾಳತ್ವದಲ್ಲಿ ಶವ ಸಂಸ್ಕಾರ ನಡೆಸಿದ ಪೊಲೀಸ್

ಮುಂದಾಳತ್ವದಲ್ಲಿ ಶವ ಸಂಸ್ಕಾರ ನಡೆಸಿದ ಪೊಲೀಸ್

ಕಳೆದ ಬುಧವಾರವೂ ಪುಣಜನೂರು - ಸತ್ಯಮಂಗಲ ರಸ್ತೆಯಲ್ಲಿ ಕಾಡಾನೆ ತುಳಿತದಿಂದ ಅನಾಥ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಕೊರೊನಾ ಭೀತಿಯಿಂದ ಗ್ರಾಮಸ್ಥರು ಶವ ಸಂಸ್ಕಾರ ನಡೆಸಲು ಮುಂದೆ ಬರಲಿಲ್ಲ. ಆದರೆ ಶವ ಮಹಜರು ನಡೆಸಿದ್ದ ಮಾದೇಗೌಡ ಅವರೇ ಜೆಸಿಬಿ ಕರೆಸಿ ಗುಂಡಿ ತೆಗೆಸಿ ತಾವೇ ಗುಂಡಿಯೊಳಗೆ ಇಳಿದು ಅನಾಥ ಶವಕ್ಕೆ ಮುಕ್ತಿ ಕಾಣಿಸಿದ್ದಾರೆ.

 ಇಂಥವರ ಸಂಖ್ಯೆ ಹೆಚ್ಚಲಿ

ಇಂಥವರ ಸಂಖ್ಯೆ ಹೆಚ್ಚಲಿ

ಎಲೆಮರೆಯ ಕಾಯಿಯಂತೆಯೇ ಉಳಿದುಕೊಂಡು ಸಮಾಜಸೇವೆಯಲ್ಲಿ ತೊಡಗಿರುವ ಇವರು, "ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ ಅಷ್ಟೆ" ಎಂದು ಹೇಳುತ್ತಾರೆ. ತಾವು ಹುಣಸೂರು, ಚಾಮರಾಜನಗರ, ಯಳಂದೂರು ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದು, ಮೂವತ್ತು ವರ್ಷಗಳಿಂದಲೂ ವಾರಸುದಾರರಿಲ್ಲದ ಹೆಣಗಳ ಶವ ಸಂಸ್ಕಾರ ಮಾಡುತ್ತಾ ಬಂದಿರುವುದಾಗಿ ಹೇಳುತ್ತಾರೆ. ಇಂತಹ ಮಾನವೀಯ ಅಧಿಕಾರಿಗಳ ಸಂಖ್ಯೆ ಹೆಚ್ಚಲಿ ಎಂದು ಆಶಿಸೋಣ.

English summary
Police officer working in chamarajangar police station as assistant sub inspector HB Madegowda doing social work by conducting last rituals of orphan corpse since 30 years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X