ಚಾಮರಾಜನಗರದಲ್ಲಿ ಆರಕ್ಷಕರೇ ಭಯದಲ್ಲಿ ಬದುಕುತ್ತಿದ್ದಾರೆ!
ಚಾಮರಾಜನಗರ, ಅಕ್ಟೋಬರ್.24: ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದ ಆರಕ್ಷಕರೇ ಭಯದಲ್ಲಿ ಬದುಕಬೇಕಾದ ದುಸ್ಥಿತಿ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಂಡುಬಂದಿದೆ.
ಪೊಲೀಸ್ ಠಾಣೆ ನಡೆಸಲು ಸ್ವಂತ ಕಟ್ಟಡ ಇಲ್ಲದೆ ತಾಲೂಕು ಪಂಚಾಯಿತಿ ಅಧೀನದ ತಾಲೂಕು ಬೋರ್ಡ್ ವಸತಿ ಗೃಹದ ಅಧೀನದ ಕಟ್ಟಡದಲ್ಲಿ ನಡೆಯುತ್ತಿದೆ. ಆದರೆ ಈಗ ಆ ಕಟ್ಟಡ ದುಸ್ಥಿತಿಗೆ ತಲುಪಿದ್ದು, ಕಾರ್ಯ ನಿರ್ವಹಿಸಲು ಭಯಪಡುವಂತಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ಈ ಕಟ್ಟಡ ಯಾವಾಗ ಬೇಕಾದರೂ ಬಿದ್ದು ಹೋಗುವಂತಹ ಸ್ಥಿತಿಯಲ್ಲಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾರಣ ವಿಷ ಜಂತುಗಳ ಆವಾಸ ಸ್ಥಾನವಾಗಿದೆ ಎಂದರೂ ತಪ್ಪಾಗಲಾರದು.
ಸದ್ಯಕ್ಕೆ ಈ ಕಟ್ಟಡ ತಾಲೂಕು ಪಂಚಾಯಿತಿಗೆ ಸೇರಿದ ಕಾರಣ ಪೊಲೀಸ್ ಇಲಾಖೆ ಅದರತ್ತ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಶಿಥಿಲಗೊಂಡ ಈ ಕಟ್ಟಡದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಟ್ಟಡ ವಿಷ ಜಂತುಗಳಿಗೆ ಆವಾಸ ಸ್ಥಾನವಾಗಿದ್ದು, ಹುಳ ಹುಪ್ಪಟೆಗಳು ಆಗಾಗ ಕಾಣಿಸಿಕೊಳ್ಳುತ್ತಲಿವೆ.

ಸ್ಟೋರ್ ರೂಂನಲ್ಲಿ ಹಾವಿನ ಮರಿ
ಹಿಂದೊಮ್ಮೆ ಠಾಣೆಯಲ್ಲಿ ಹಾವಿನ ಮರಿಯೊಂದು ಸ್ಟೋರ್ ರೂಂನಲ್ಲಿರುವ ರಟ್ಟಿನ ಡಬ್ಬದೊಳಗೆ ಹರಿದಾಡುತ್ತಿತ್ತು. ಇದನ್ನು ಕಂಡ ಪೊಲೀಸ್ ಸಿಬ್ಬಂದಿ ಭಯಭೀತರಾಗಿದ್ದರು. ಇಂತಹ ಘಟನೆಗಳು ಹಲವು ಬಾರಿ ನಡೆದಿದೆ.

ನಿಜಕ್ಕೂ ಬೇಸರದ ಸಂಗತಿ
ಪೊಲೀಸ್ ಠಾಣೆಯೇ ಸುಸಜ್ಜಿತ ಕಟ್ಟಡವಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದರೆ ಬೇರೆ ಎಲ್ಲದಕ್ಕೂ ಲಕ್ಷಾಂತರ ರೂ. ಖರ್ಚು ಮಾಡುವ ಸರ್ಕಾರ ಪೊಲೀಸ್ ಇಲಾಖೆಯ ಠಾಣೆಗೆ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಸಾರ್ವಜನಿಕರ ಆಕ್ರೋಶಕ್ಕೆ ಕಾರಣ
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಪಟ್ಟಣ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ಅಥವಾ ಇರುವ ಕಟ್ಟಡವನ್ನು ತಮ್ಮ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆಗೆ ಮುಂದಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿ
ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಪೊಲೀಸ್ ಠಾಣೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಡಬೇಕಾದ ಅಗತ್ಯವಿದೆ. ಸಾರ್ವಜನಿಕರ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುವ ಪೊಲೀಸರು ನೆಮ್ಮದಿಯಾಗಿ ಕೆಲಸ ಮಾಡಲು ಸುಸಜ್ಜಿತ ಕಟ್ಟಡದಲ್ಲಿ ಠಾಣೆಯನ್ನು ನಿರ್ಮಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications