ಮೈಸೂರಿನಲ್ಲಿ ಮೋದಿ; ಬಂಡೀಪುರದಲ್ಲಿ ಸಫಾರಿ ಆರಂಭ
ಚಾಮರಾಜನಗರ, ಏಪ್ರಿಲ್ 09; ಕರ್ನಾಟಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ಆರಂಭಿದ್ದಾರೆ. ಚೆನ್ನೈನಿಂದ ಶನಿವಾರ ರಾತ್ರಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ, ಮೈಸೂರು ನಗರದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಅವರು ಬಂಡೀಪುರ ಮತ್ತು ಮಧುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದಾರೆ. ಬೆಳಗ್ಗೆ 6.40ರ ಸುಮಾರಿಗೆ ಅವರು ಮೈಸೂರಿನಿಂದ ಮೇಲುಕಾಮನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿರುವ ಹೆಲಿಪ್ಯಾಡ್‌ಗೆ ಆಗಮಿಸಿದರು. ಬಳಿಕ ಬಂಡೀಪುರದಲ್ಲಿ ಸಫಾರಿ ಆರಂಭಿಸಿದರು.

ನರೇಂದ್ರ ಮೋದಿ ಬಂಡೀಪುರ ರಾಷ್ಟ್ರೀಯ ಉದ್ಯಾನ, ಮದುಮಲೈ ರಾಷ್ಟ್ರೀಯ ಉದ್ಯಾನವನ, ಹುಲಿ ಸಂರಕ್ಷಿತ ಅರಣ್ಯ ಧಾಮದಲ್ಲಿ ಸಫಾರಿ ನಡೆಸುತ್ತಿದ್ದಾರೆ. 11 ಗಂಟೆಯ ಸುಮಾರಿಗೆ ಅವರು ಮೈಸೂರು ನಗರಕ್ಕೆ ವಾಪಸ್ ಆಗಲಿದ್ದು, ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಅಪಾರವಾದ ನಷ್ಟ; ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ಭದ್ರತೆ ದೃಷ್ಟಿಯಿಂದ ಸಫಾರಿ, ರೆಸಾರ್ಟ್, ಹೋಂ ಸ್ಟೇಗಳನ್ನು ಗುರುವಾರದಿಂದಲೇ ಮುಚ್ಚಲಾಗಿದೆ. ಇದು ವಾರಾಂತ್ಯ ಅದರಲ್ಲೂ ಸರಣಿ ರಜೆ ಇರುವುದರಿಂದ ರೆಸಾರ್ಟ್, ಹೋಂ ಸ್ಟೇ ಮಾಲೀಕರು ಅಪಾರ ನಷ್ಟ ಅನುಭವಿಸಿದ್ದಾರೆ. ಬೇಸಿಗೆ ರಜೆಯೂ ಇರುವುದಿಂದ ಜನರು ಭಾನುವಾರ ಬಂಡೀಪುರದಲ್ಲಿ ಕುಟುಂಬದ ಜೊತೆ ಸಫಾರಿ ಮಾಡುವ ಆಲೋಚನೆಯಲ್ಲಿದ್ದರು. ಅದಕ್ಕೆ ಸಹ ಅವಕಾಶ ಇಲ್ಲದಂತೆ ಆಗಿದೆ.

ಮೂರು ದಿನಗಳ ರಜೆ ಕಾರಣ ವಿವಿಧ ಕಡೆಗಳಿಂದ ಊಟಿಗೆ ಹಲವಾರು ಜನರು ಸಂಚಾರ ನಡೆಸುತ್ತಿದ್ದರು. ಆದರೆ ಮೋದಿ ಭೇಟಿ ಹಿನ್ನಲೆಯಲ್ಲಿ ಮೇಲುಕಾಮನಹಳ್ಳಿಯಿಂದ ಮಧುಮಲೆ ತನಕ ಇರುವ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆದ್ದರಿಂದ ಎಲ್ಲಾ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿರುವ ಕಾರಣ ವಾಹನ ಸಂಚಾರ ದಟ್ಟಣೆ ಉಂಟಾಗಿ ಜನರು ಸಂಕಷ್ಟ ಅನುಭವಿಸಿದರು.
ಮಾವುತರೊಂದಿಗೆ ಸಂವಾದ; ತಮಿಳುನಾಡಿನಲ್ಲಿರುವ ಮದುಮಲೈ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಲಿರುವ ಪ್ರಧಾನಿ ಮೋದಿ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'The Elephant Whisperers' ಮಾವುತರಾದ ಬೊಮ್ಮನ್ ದಂಪತಿಗಳ ಜೊತ ಸಹ ಸಂವಾದ ನಡೆಸಲಿದ್ದಾರೆ. ಬಳಿಕ 10.30ರ ಸುಮಾರಿಗೆ ಮೈಸೂರು ನಗರಕ್ಕೆ ವಾಪಸ್ ಆಗಲಿದ್ದಾರೆ. ಬಳಿಕ ಮೈಸೂರು ನಗರದ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. 2022ನೇ ಸಾಲಿನ ಹುಲಿಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಬೆಳ್ಳಿ ನಾಣ್ಯ, ಪುಸ್ತಕಗಳನ್ನು ಸಹ ಬಿಡುಗಡೆಗೊಳಿಸಲಿದ್ದಾರೆ. ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು, ವನ್ಯಜೀವಿ ವಲಯದ ತಜ್ಞರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ.
ಶನಿವಾರ ತೆಲಂಗಾಣ, ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದರು. ಮೈಸೂರಿನ ಕಾರ್ಯಕ್ರಮಮ ಮಗಿಸಿ ಮಧ್ಯಾಹ್ನ 12.30ಕ್ಕೆ ನರೇಂದ್ರ ಮೋದಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ. ಬಿಜೆಪಿ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಅವರು ಈ ಬಾರಿಯ ರಾಜ್ಯ ಭೇಟಿ ವೇಳೆ ಪಾಲ್ಗೊಳ್ಳುತ್ತಿಲ್ಲ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಬಳಿಕ ಇದು ನರೇಂದ್ರ ಮೋದಿ ಅವರ ಮೊದಲ ಕರ್ನಾಟಕ ಭೇಟಿಯಾಗಿದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಮೇ 10ರ ಬುಧವಾರ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications