New year 2024: ಗಡಿಜಿಲ್ಲೆ ಚಾಮರಾಜದಲ್ಲಿರುವ ಈ ಅದ್ಭುತ ತಾಣಗಳಿಗೆ ಭೇಟಿ ನೀಡಲು ಇದೇ ಸೂಕ್ತ ಸಮಯ, ಮಾಹಿತಿ ತಿಳಿಯಿರಿ
ಚಾಮರಾಜನಗರ, ಡಿಸೆಂಬರ್, 31: 2023ರ ವರ್ಷಾಂತ್ಯಕ್ಕೆ ಬಂದು ತಲುಪಿದ್ದು, 2024ರನ್ನು ಬರಮಾಡಿಕೊಳ್ಳಲು ಕಾತರ ಏರ್ಪಟ್ಟಿದ್ದೆ. ಹೊಸ ವರ್ಷಾಚರಣೆಯನ್ನು ದೇವರ ದರ್ಶನ ಪಡೆದು ಆಧ್ಯಾತ್ಮದಿಂದ ಜೀವನದಲ್ಲಿ ನವೊಲ್ಲಾಸ ತುಂಬಲು ಚಾಮರಾಜನಗರದಲ್ಲಿ ಹಲವು ದೇವಾಲಯಗಳಿದ್ದು, ಭಕ್ತಿಯಿಂದ ಹೊಸ ವರ್ಷ ಆರಂಭಿಸಬಹುದಾಗಿದೆ.
ಬಿಳಿಗಿರಿರಂಗನಾಥ ದೇವಾಲಯ: ಚಾಮರಾಜನಗರ ಜಿಲ್ಲೆಗೆ ಕಳಸಪ್ರಾಯದಂತಿರುವ ಬಿಳಿಗಿರಿರಂಗನಾಥ ಬೆಟ್ಟವಿದ್ದು, ಸೋಲಿಗರ ಆರಾಧ್ಯದೈವ ಬಿಳಿಗಿರಿರಂಗನಾಥ ಇಲ್ಲಿ ನೆಲೆಗೊಂಡಿದ್ದಾನೆ. ಬೆಂಗಳೂರು, ಮೈಸೂರನಿಂದ ಬಸ್ ಸೌಲಭ್ಯವಿದ್ದು, ಇಡೀ ಕುಟುಂಬದೊಟ್ಟಿಗೆ ದೇವರ ದರ್ಶನ ಪಡೆದು ಹಸಿರ ವೈಭವ ಕಣ್ತುಂಬಿಕೊಳ್ಳಬಹುದಾಗಿದೆ.

ಬಿದ್ದಾಂಜನೇಯ ದೇಗುಲ: ಬಿಳಿಗಿರಿರಂಗನಾಥ ಬೆಟ್ಟದ ತಪ್ಪಲಿನಲ್ಲೇ ಬಿದ್ದಾಂಜನೇಯ ದೇವಾಲಯವಿದೆ. ಸಾಮಾನ್ಯವಾಗಿ ಆಂಜನೇಯ ಮೂರ್ತಿಗಳು ನಿಂತಿರುವ ಭಂಗಿಯಲ್ಲಿದ್ದರೇ ಇಲ್ಲಿ ಮಲಗಿರುವ ಭಂಗಿಯಲಿದ್ದು, ಎಲ್ಲಾ ಇಷ್ಟಾರ್ಥಗಳು ಈಡೇರುವ, ಅಂಜಿಕೆ ದೂರ ಮಾಡುವ ನಂಬಿಕೆ ಭಕ್ತರದ್ದಾಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಕರ್ನಾಟದ ಕಾಶ್ಮೀರ ಅಂತಲೇ ಕರೆಸಿಕೊಳ್ಳುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ 15 ಕಿಲೋ ಮೀಟರ್ ಸಂಚರಿಸಿದರೇ ಸಿಗಲಿದೆ. ಸದಾ ಹಿಮದಿಂದ ಆವೃತವಾಗಿರುವ ಬೆಟ್ಟದಲ್ಲಿ ಹೊಸ ವರ್ಷದಂದು ಭವಿಷ್ಯ ಯೋಜನೆಗಳನ್ನು ಕಟ್ಟಿಕೊಳ್ಳಲು ಹೇಳಿ ಮಾಡಿಸಿದ ಜಾಗವಾಗಿದೆ. ಇನ್ನು ಕುಟುಂಬದೊಟ್ಟಿಗೆ ಅಂದು ಕಳೆಯುವ ಪ್ರತಿ ಕ್ಷಣವು ಅದ್ಭುತ ಕ್ಷಣವಾಗಿಸುತ್ತವೆ ಇಲ್ಲಿನ ರೋಮಾಂಚಕ ದೃಶ್ಯಗಳು. ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆದು ಹಿಮಚ್ಚಾಧಿತ ಬೆಟ್ಟವನ್ನು ಕಣ್ತುಂಬಿಕೊಂಡು ಫೋಟೋಗೆ ಫೋಸ್ ಕೊಟ್ಟರೇ ಹೊಸ ವರ್ಷಾಚರಣೆ ಅರ್ಥಪೂರ್ಣ ಆಗಲಿದೆ.
ಮಲೆ ಮಹದೇಶ್ವರ ಬೆಟ್ಟ: ಕರ್ನಾಟಕದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದಾದ ಮಲೆಮಹದೇಶ್ವರ ಬೆಟ್ಟ ಹನೂರು ತಾಲೂಕಿನಲ್ಲಿದೆ. ಬೆಂಗಳೂರು, ಕೊಳ್ಳೇಗಾಲದಿಂದ ಸಾಕಷ್ಟು ಬಸ್ ಸೌಲಭ್ಯವಿದ್ದು, ಪವಾಡ ಪುರುಷನ ಸನ್ನಿಧಿಯಲ್ಲಿ ಹೊಸ ವರ್ಷದ ದಿನದಂದು ಇಷ್ಟಾರ್ಥಗಳನ್ನು ಮಾದಪ್ಪನಲ್ಲಿ ಬೇಡಿಕೊಳ್ಳಬಹುದಾಗಿದೆ.
ಮಧ್ಯ ರಂಗನಾಥ: ಕೊಳ್ಳೇಗಾಲದಿಂದ ಭರಚುಕ್ಕಿ ಜಲಪಾತ ಸಮೀಪ ಮಧ್ಯ ರಂಗನಾಥ ದೇಗುಲವಿದ್ದು, ಹೊಸ ವರ್ಷ ಹಾಗೂ ಧನುರ್ಮಾಸದ ಸಮಯದಲ್ಲಿ ಮಧ್ಯ ರಂಗನಾಥನ ದರ್ಶನ ಪಡೆಯಬಹುದಾಗಿದೆ.
ಇನ್ನು ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಮೈಸೂರಿನ ಮಹಾರಾಜರು ಸ್ಥಾಪನೆ ಮಾಡಿರುವ ಚಾಮರಾಜೇಶ್ವರ ದೇಗುಲದಲ್ಲಿ ರಾಜತ್ವ ಮತ್ತು ದೈವತ್ವ ಎರಡೂ ಇದ್ದು, ಹೊಸ ವರ್ಷಾಚರಣೆ ದಿನದಂದು ಐತಿಹಾಸಿಕ ದೇಗುಲಕ್ಕೆ ಭೇಟಿ ಕೊಟ್ಟು ಈಶ್ವರನ ದರ್ಶನ ಪಡೆಯಬಹುದಾಗಿದೆ. ಹೊಸ ವರ್ಷಾಚರಣೆ ದಿನದಂದು ಗಡಿಜಿಲ್ಲೆಗೆ ಬಂದರೇ ದೇವರು, ಅರಣ್ಯದ ದರ್ಶನ ಪಡೆಯಲು ಸೂಕ್ತವಾಗಿದೆ.












Click it and Unblock the Notifications