ಕಾಂಗ್ರೆಸ್ ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿ ಬ್ಯಾಗಿಗೆ ಹಾಕ್ತಿದೆ-ಎನ್.ಮಹೇಶ್
ಚಾಮರಾಜನಗರ, ಜುಲೈ 22: ಬಿಜೆಪಿ ಪ್ರತಿಭಟನೆಯನ್ನು ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ತಿರುಚಿ ದಲಿತರ ಮೇಲೆ ದೌರ್ಜನ್ಯ ಎಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎನ್.ಮಹೇಶ್ ಹೇಳಿದರು.
ಚಾಮರಾಜನಗರದಲ್ಲಿ ಬಿಜೆಪಿ ಶಾಸಕರ ಅಮಾನತು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎನ್.ಮಹೇಶ್, ಬಿಜೆಪಿಯ ಪ್ರತಿಭಟನೆಯನ್ನು ಇಬ್ಬರು ಸಚಿವರು ತಿರುಚಿ ದಲಿತರನ್ನು ದಾಳವನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರ ರಾಜಕಾರಣ ನಂಬಲು ದಲಿತರು ಗುಗ್ಗುಗಳಲ್ಲ ಎಂದು ಆಕ್ರೋಶ ಹೊರಹಾಕಿದರು.

ಐಎಎಸ್ ಅಧಿಕಾರಿಗಳನ್ನು ಪ್ರೊಟೊಕಾಲ್‌ಗೆ ನೇಮಿಸಿದ್ದು ಸರಿನಾ ಎಂಬ ಪ್ರಶ್ನೆಗೆ ಉತ್ತರ ಕೊಡದಿದ್ದಾಗ ಬಿಲ್ ಅನದನು ಹರಿದು ಶಾಸಕರು ಪ್ರತಿಭಟಿಸಿದ್ದಾರೆ. ಅದು ಅವರ ಹಕ್ಕು. ನಾವು ಕೈ ಮುಗಿದು ಒಳ ಹೋಗುವ ಸದನದ ಬಾಗಿಲನ್ನು ಸಿದ್ದರಾಮಯ್ಯ ಒದ್ದು ಹೊರಹೋಗಿದ್ದರು. ಕುಸ್ತಿಗೆ ಕರೆದಿದ್ದರು. ಸಂಗಮೇಶ್ ಬಟ್ಟೆ ಹರಿದುಕೊಂಡಿದ್ದರು. ಅದು ಸಂವಿಧಾನ ವಿರೋಧಿ, ನಾವು ಮಾಡಿದ್ದು ಪ್ರತಿಭಟನೆ ಅಷ್ಟೇ, ಬಾವಿಗೆ ಇಳಿದು ಪ್ರತಿಭಟನೆ ಮಾಡುವುದು ಸಹಜ ಪ್ರಕ್ರಿಯೆ ಎಂದರು.
ದುರ್ಯೋಧನ ಪಾರ್ಟ್ ಹಾಕಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಪ್ರಬುದ್ಧ ರಾಜಕಾರಣಿ ಎಂದುಕೊಂಡಿದ್ದೆವು, ಆದರೆ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಅವರು ಪ್ರತಿಭಟನೆ ಮಾಡುತ್ತಿದ್ದರೇ ಗೂಡ್ಸೆ ಮುಂದೆ ಮಾಡಿ ಎನ್ನುತ್ತಾರೆ. ಭಯೋತ್ಪಾದಕರನ್ನು ಮುಚ್ಚಿಡಲು ಕಾಂಗ್ರೆಸ್ ನೋಡುತ್ತಿದ್ದು ಮೂರನೇ ದರ್ಜೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗ್ಯಾರಂಟಿಗಳ ವಿರೋಧಿ ಬಿಜೆಪಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ನಾವು ಗ್ಯಾರಂಟಿ ವಿರೋಧಿಗಳಲ್ಲ. ಆದರೆ ನಮ್ಮ ಒತ್ತಾಯ ಪ್ರಣಾಳಿಕೆಯಲ್ಲಿ ಕೊಟ್ಟ ರೀತಿ ಜಾರಿ ಮಾಡಿ ಎನ್ನುತ್ತಿದ್ದೇವೆ, ಅಬಕಾರಿ ಸುಂಕವನ್ನು ಶೇ.20 ರಷ್ಟು ಏರಿಕೆ ಮಾಡಿ ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿ ಬ್ಯಾಗಿಗೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಲೇವಡಿ ಮಾಡಿದರು.












Click it and Unblock the Notifications