2023ರಲ್ಲಿ ಗಡಿಜಿಲ್ಲೆಯ ಪ್ರವಾಸಿ ತಾಣಗಳಿಗೆ 70 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ-ಅಂಕಿಅಂಶಗಳ ವಿವರ ತಿಳಿಯಿರಿ
ಚಾಮರಾಜನಗರ, ಡಿಸೆಂಬರ್, 26: ಗಡಿಜಿಲ್ಲೆ ಚಾಮರಾಜನಗರ ಅರಣ್ಯ ಪ್ರದೇಶ ಹೊಂದಿರುವ ಜೊತೆಗೆ ಪುರಾತನ ದೇಗುಲ, ಪ್ರಸಿದ್ಧ ಯಾತ್ರಸ್ಥಳಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, 2023ರಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಚಾಮರಾಜನಗರ ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರದ 22 ಪ್ರವಾಸಿ ಸ್ಥಳಗಳಿಗೆ 2023ರಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಅತಿಹೆಚ್ಚು ಜನರು ಭೇಟಿ ಕೊಟ್ಟ ಸ್ಥಳದಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮೊದಲ ಸ್ಥಾನದಲ್ಲಿದೆ.

ನಾಡಿನ ಪ್ರಸಿದ್ಧ ಯಾತ್ರಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ 40 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದರೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 1 ವರ್ಷದಲ್ಲಿ 2.5 ಲಕ್ಷದಷ್ಟು ಮಂದಿ ಹಿಮಾಚ್ಛಾದಿತ ಬೆಟ್ಟದ ಚೆಲುವನ್ನು ಕಂಡಿದ್ದಾರೆ. ಇನ್ನು ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯಲ್ಲಿ 22 ಪ್ರವಾಸಿ ಸ್ಥಳಗಳನ್ನು ಗುರುತಿಸಿದ್ದು, ಪ್ರವಾಸಿಗರು ಭೇಟಿ ನೀಡಿದ ಅಂದಾಜು ಸಂಖ್ಯೆಯನ್ನು ಪ್ರತಿತಿಂಗಳು ಲೆಕ್ಕ ಹಾಕಲಿದೆ.
ಪ್ರವಾಸಿ ತಾಣಗಳ ವಿವರ: ಚಾಮರಾಜನಗರದ ಚಿಕ್ಕಹೊಳೆ, ಸುವರ್ಣಾವತಿ, ಕರಿವರದರಾಜಬೆಟ್ಟ, ನರಸಮಂಗಲ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತೆರಕಣಾಂಬಿ ದೇವಾಲಯ, ಹುಲಗನಮುರುಡಿ, ಕೊಳ್ಳೇಗಾಲದ ಮರಡಿಗುಡ್ಡ, ತ್ರಯಂಬಕಪುರ, ಬಿಳಿಗಿರಿರಂಗನ ಬೆಟ್ಟ, ಬಳೆಮಂಟಪ, ಹೊಗೆನಕಲ್ ಜಲಪಾತ, ಭರಚುಕ್ಕಿ, ವೆಸ್ಲಿ ಸೇತುವೆ, ಮಲೆ ಮಹದೇಶ್ವರ ಬೆಟ್ಟ, ಪಾಲಾರ್ ಗಡಿ, ಒಡೆತರಪಾಳ್ಯ ಟಿಬೆಟಿಯನ್ ಕ್ಯಾಂಪ್, ಒನ್ನಮೇಟಿ-ಅತ್ತಿಖಾನೆಗಳುಗಳಿಗೆ ಕಳೆದ ವರ್ಷ ಒಟ್ಟಾರೆ 70 ಲಕ್ಷಕ್ಕೂ ಅಧಿಕ ಮಂದಿ ಭೇಟಿ ಕೊಟ್ಟಿದ್ದಾರೆ.
ವಿದೇಶಿ ಪ್ರವಾಸಿಗರ ಭೇಟಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೆ.ಗುಡಿ, ಬಿಳಿಗಿರಿರಂಗನ ಬೆಟ್ಟಕ್ಕೆ ನೂರಾರು ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿ ಗಡಿಜಿಲ್ಲೆ ಪ್ರಕೃತಿ ಚೆಲುವನ್ನು ತುಂಬಿಕೊಂಡಿದ್ದಾರೆ. ಸರ್ಕಾರವು ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿಗೊಳಿಸಿದ ಬಳಿಕ ಗಡಿಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ.
ಜನವರಿಯಿಂದ ಆಗಸ್ಟ್‌ವರೆಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 30-35 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದರೆ, ಆಗಸ್ಟ್ ಬಳಿಕ ಇದರ ಸಂಖ್ಯೆ ದ್ವಿಗುಣಗೊಂಡಿದೆ. ನವೆಂಬರ್‌ನಲ್ಲಿ 80 ಸಾವಿರ ಮಂದಿ ಭೇಟಿ ಕೊಟ್ಟಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೂ ಕೂಡ 4-5 ಲಕ್ಷದಷ್ಟು ಇದ್ದ ಭಕ್ತರ ಸಂಖ್ಯೆ ಆಗಸ್ಟ್ ಬಳಿಕ 6-7 ಲಕ್ಷ ದಾಟಿದ್ದು, ಭರಚುಕ್ಕಿ, ಬಿಳಿಗಿರಿರಂಗನ ಬೆಟ್ಟ, ಹೊಗೆನಕಲ್ ಜಲಪಾತಕ್ಕೆ ಭೇಟಿ ಕೊಟ್ಟವರ ಸಂಖ್ಯೆ ಕಳೆದ 4 ತಿಂಗಳಲ್ಲಿ ದ್ವಿಗುಣವಾಗಿದೆ.












Click it and Unblock the Notifications