ಗುಂಡ್ಲುಪೇಟೆ: ಈ ವೈರಸ್‌ಗೆ 30ಕ್ಕೂ ಹೆಚ್ಚು ಕುರಿ ಬಲಿ
ಚಾಮರಾಜನಗರ, ಡಿಸೆಂಬರ್, 06: ವೈರಸ್ ಸೋಂಕಿಗೆ ತುತ್ತಾಗಿ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದು, ಮತ್ತಷ್ಟು ಸೋಂಕಿಗೆ ಒಳಗಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಮೇಕೆಗಳಿಗೆ ಪಿಪಿಆರ್ ಎಂಬ ಸಾಂಕ್ರಾಮಿಕ ರೋಗ ತಗುಲಿ ಅಸುನೀಗುತ್ತಿವೆ. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಂತೆಯಿಂದ ಖರೀದಿಸಿ ತಂದ ಮೇಕೆ ಮರಿಯಿಂದ ಈ ವೈರಸ್ ಹರಡಿದ್ದು, ಕಳೆದ 15 ದಿನಗಳಿಂದ 30ಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ಕಳೆದುಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಹೋರಾಟಗಾರ ಕಾಂತರಾಜು ಪ್ರತಿಕ್ರಿಯೆ ಕೊಟ್ಟಿದ್ದು, ಮೇಕೆ ಸಾಕಾಣಿಕೆದಾರರು ಸತ್ತ ಮೇಕೆಗಳನ್ನು ಕಸದ ತಿಪ್ಪೆ ಅಥವಾ ಭೂಮಿಯಲ್ಲಿ ಹೂಳುವುದನ್ನು ಮಾಡುತ್ತಿರುವುದರಿಂದ ಮತ್ತಷ್ಟು ಕುರಿಗಳಿಗೆ ಈ ವೈರಸ್ ಹರಡಿದೆ. ಕಾಯಿಲೆ ನಿಯಂತ್ರಣಕ್ಕೆ ಪಶು ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು. ಶಿವಪುರ ವಲಯದ ಪಶು ಚಿಕಿತ್ಸಕರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾಯಿಲೆ ತಡೆಗೆ ಅವರ ಸಲಹೆಯಂತೆ ರೈತರೇ ಮೈಸೂರಿನಿಂದ ಲಸಿಕೆ ಖರೀದಿಸಿ ತಂದಿದ್ದಾರೆ. ಲಸಿಕೆ ನೀಡಿದ ನಂತರವೂ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರೇ ಪಶುಸಂಗೋಪನಾ ಇಲಾಖೆ ಸಚಿವರಾಗಿದ್ದಾರೆ. ಇವರ ಜೊತೆಗೆ ಕ್ಷೇತ್ರದ ಶಾಸಕರು ಕಾಯಿಲೆ ಬಗ್ಗೆ ಮಾಹಿತಿ ಪಡೆದು ಸಚಿವರ ಗಮನಕ್ಕೆ ತಂದು ರೋಗ ತಡೆಗೆ ಕ್ರಮ ವಹಿಸಿ, ಮೇಕೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಆ ಮೂಲಕ ರೈತ ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಚೌಡಹಳ್ಳಿ ಗ್ರಾಮದಲ್ಲಿ ಪಿಪಿಆರ್ ವೈರಸ್ ಸೋಂಕಿನಿಂದ ಕಳೆದ 15 ದಿನಗಳಲ್ಲಿ 30ಹೆಚ್ಚು ಮೇಕೆ ಮತ್ತು ಮರಿಗಳು ಮೃತಪಟ್ಟಿವೆ. ಸಣ್ಣ ಮರಿಗಳು ವೈರಸ್ ಸೋಂಕಿನಿಂದ ಮೃತ ಪಟ್ಟಾಗ ಮರಿಗಳನ್ನು ಹೂಳದೆ ಬೀಸಾಡಿದ್ದಾರೆ. ಆದ್ದರಿಂದ ಸೋಂಕು ಉಲ್ಬಣಗೊಂಡು ಹರಡಿದೆ. ಗ್ರಾಮದಲ್ಲಿ ಎಲ್ಲಾ ಮರಿಗಳಿಗೂ ವ್ಯಾಕ್ಸಿನೇಷನ್ ಮಾಡಲಾಗಿದೆ, ಇನ್ನೂ ಮರಿಗಳ ಸಾವು ನಿಯಂತ್ರಣವಾಗಿಲ್ಲ. ಸೋಂಕು ನಿಯಂತ್ರಣಕ್ಕೆ ಬರಲು 21 ದಿನಗಳು ಬೇಕು. ಮೃತಪಟ್ಟ ಎಲ್ಲಾ ಮೇಕೆಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications