ಗುಂಡ್ಲುಪೇಟೆ: 17 ಅಡಿಗೂ ಅಧಿಕ ಉದ್ದದ ಹೆಬ್ಬಾವು ಪತ್ತೆ, ವಿಡಿಯೋ ವೈರಲ್
ಚಾಮರಾಜನಗರ, ಆಗಸ್ಟ್, 26: ಚಾಮರಾಜನಗರ ಜಿಲ್ಲೆಯಲ್ಲಿ ಆಗಾಗ ಪ್ರಾಣಿಗಳು ಕಾಣಿಸಿಕೊಂಡು, ಆ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಬರೋಬ್ಬರಿ 17 ಅಡಿಗೂ ಉದ್ದ ಮತ್ತು ಭಾರೀ ತೂಕದ ಹೆಬ್ಬಾವನ್ನು ರಕ್ಷಣೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಲತ್ತೂರು ಗ್ರಾಮದಲ್ಲಿ ನಡೆದಿದೆ.
ಆಲತ್ತೂರು ಗ್ರಾಮದ ಶಾಂತೇಶ್ ಎಂಬುವವರ ತೋಟದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲಸ ಮಾಡುತ್ತಿದ್ದವರನ್ನು ತನ್ನ ಗಾತ್ರದಿಂದಲೇ ಪತರಗುಟ್ಟುವಂತೆ ಮಾಡಿದೆ. ಗುಂಡ್ಲುಪೇಟೆ ಉರಗ ರಕ್ಷಕ ಸ್ವಾಮಿ ಅವರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ದೌಡಾಯಿಸಿ ಅರ್ಧ ತಾಸು ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ.

17 ಅಡಿಗೂ ಅಧಿಕ ಉದ್ದ, 30-40 ಕೆ.ಜಿ. ತೂಕವಿದ್ದ ಹೆಬ್ಬಾವನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿದ್ಯುತ್ ಶಾಕ್‌ಗೆ ಒಳಗಾಗಿ ನರಳಾಡುತ್ತಿದ್ದ ಕೋತಿಯ ರಕ್ಷಣೆ: ಚಾಮರಾಜನಗರ ಜಿಲ್ಲೆಯಲ್ಲಿ ಒಂದಲ್ಲ ಒಂದು ಪ್ರಾಣಿಗಳು ಕಾಣಿಸಿಕೊಂಡು ಸುದ್ದಿಯಾಗುತ್ತಲೇ ಇರುತ್ತವೆ. ಆದರೆ ಇದೀಗ ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದ ಕೋತಿಗೆ ಯುವಕರು ಚಿಕಿತ್ಸೆ ಕೊಡಿಸಿ, ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಹನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ಆಗಸ್ಟ್ 25) ನಡೆದಿದೆ.
ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಆವರಣದಲ್ಲಿ ಕೋತಿಯೊಂದು ವಿದ್ಯುತ್ ಕಂಬದಲ್ಲಿ ಕುಳಿತಿದ್ದಾಗ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡಿದೆ. ತಕ್ಷಣ ಮಲೆ ಮಹದೇಶ್ವರ ಬೆಟ್ಟದ ನಿವಾಸಿಗಳಾದ ಬೀರೇಶ್, ಶಿವು ಜಯಂತ್ ಇತರರು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಗಮನ ಸೆಳೆದಿದ್ದಾರೆ.
ವಿದ್ಯುತ್ ಶಾಕ್‌ಗೆ ಕೋತಿಯು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ರಭಸಕ್ಕೆ ಬಲಗಡೆಯ ಕೈಗೆ ತುಂಬಾ ಪೆಟ್ಟಾಗಿತ್ತು. ಇನ್ನು ಇದೀಗ ಚಿಕಿತ್ಸೆ ಬಳಿಕ ಗಾಯಗೊಂಡಿದ್ದ ಕೋತಿಯು ಚೇತರಿಸಿಕೊಂಡಿದ್ದು, ಸ್ಥಳೀಯರು ಹಣ್ಣು ಹಂಪಲು ಕೊಟ್ಟು ಸಂತೈಸಿದ್ದಾರೆ.
ನಡುರಸ್ತೆಯಲ್ಲೇ ಹಸು ಕೊಂದ ಚಿರತೆ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹೊರವಲಯದ ರಸ್ತೆಯಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಬುಧವಾರ (ಆಗಸ್ಟ್ 14) ಮಟ.. ಮಟ.. ಮಧ್ಯಾಹ್ನ ನಡೆದಿದೆ. ಹಾಗಾದರೆ ಈ ಹಸು ಯಾರಿಗೆ ಸೇರಿದ್ದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸತ್ತೇಗಾಲ ಗ್ರಾಮದ ಕಲ್ಯಾಣಿ ಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಚಿರತೆ ದಿಢೀರ್ ಹಸುವಿನ ಮೇಲೆ ದಾಳಿ ಮಾಡಿ ಹಸುವನ್ನು ಕೊಂದಿದೆ.
ಗ್ರಾಮದ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ರೈತನ ಎದುರೇ ಮಧ್ಯಾಹ್ನ ನಡು ರಸ್ತೆಯಲ್ಲಿ ಚಿರತೆ ದಿಢೀರ್ ಹಸುವಿನ ಕುತ್ತಿಗೆಯನ್ನು ಹಿಡಿದು ರಕ್ತ ಕುಡಿಯುತ್ತಿತ್ತು. ಇದನ್ನು ಕಂಡ ರೈತರು ಜೋರಾಗಿ ಕೂಗಿ ದೊಣ್ಣೆಯನ್ನು ಎತ್ತಿಕೊಂಡು ಚಿರತೆಯ ಬಳಿ ಓಡಿ ಹೋದಾಗ ಗಾಬರಿಗೊಂಡ ಚಿರತೆ ಹಸುವಿನ ಕುತ್ತಿಗೆಯನ್ನು ಬಿಟ್ಟು ಜಮೀನ ಕಡೆ ಓಡಿಹೋಯಿತು.
"ನಮ್ಮ ಹಸು ಸಾವಿಗೆ ಅರಣ್ಯ ಇಲಾಖೆಯವರೇ ಕಾರಣ. ಚಿರತೆ ಇದೆ ಎಂದು ಎಷ್ಟೇ ಮಾಹಿತಿ ನೀಡಿದರೂ ಸಹ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಅನಾಹುತ ಆದರೆ ಅರಣ್ಯ ಇಲಾಖೆಯವರೇ ನೇರ ಹೊಣೆಗಾರರಾಗುತ್ತಾರೆ," ಎಂದು ರೈತ ಮುಖಂಡ ಶೈಲೇಂದ್ರ, ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಅಕ್ಕಪಕ್ಕದ ಪ್ರದೇಶದಲ್ಲಿ ಬೋನನ್ನು ಇಟ್ಟಿದ್ದಾರೆ. ರಾತ್ರಿಯಿಡೀ ಚಿರತೆಗಾಗಿ ಕಾಯುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications