ಕರ್ನಾಟಕ ಗಡಿ ಜಿಲ್ಲೆಯ 1,500 ಗ್ರಾಮ ಪಂ. ಅಭಿವೃದ್ಧಿ: ಸಿಎಂ ಬೊಮ್ಮಾಯಿ
ಚಾಮರಾಜನಗರ, ಡಿಸೆಂಬರ್ 13: ಕರ್ನಾಟಕದ ಗಡಿ ಜಿಲ್ಲೆಯ 1500 ಕ್ಕೂ ಹೆಚ್ಚಿನ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಚಾಮರಾಜನಗರ ಜಿಲ್ಲೆಯ ಹನೂರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ರಾಜ್ಯದ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಗಡಿ ಜಿಲ್ಲೆಯ ಗ್ರಾಮ ಪಂಚಾಯತ್‍ಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳುವುದಾಗಿ ಈಗಾಗಲೇ ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದರು.
ರಾಜ್ಯದ ಗಡಿ ಭಾಗದ ಶಾಲೆಗಳು, ರಸ್ತೆಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಗೆ 100 ಕೋಟಿ ರೂ.ಗಳನ್ನು ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗುವುದು. ಗಡಿ ಭಾಗಗಳ ಜನರ ಸಂಪೂರ್ಣ ಅಭಿವೃದ್ಧಿಯನ್ನು ಕೈಗೊಳ್ಳಬೇಕಿದೆ. ಮಧ್ಯಭಾಗದ ರಾಜ್ಯವನ್ನು ಗಮನಿಸಿದಷ್ಟೇ ದೂರದ ಪ್ರತಿ ಒಂದು ಗ್ರಾಮವನ್ನು ಅಭಿವೃದ್ಧಿ ಮಾಡುವ ಸಂಕಲ್ಪ ನಮ್ಮ ಸರ್ಕಾರಕ್ಕಿದೆ.
ಕರ್ನಾಟಕದಲ್ಲಿರುವ ಗಡಿ ಭಾಗದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿರುವುದರಿಂದ ಗಡಿಯಾಚೆ ಇರುವ ಕನ್ನಡಿಗರೂ ಕೂಡ ಅದೇ ರೀತಿಯ ಅಭಿವೃದ್ಧಿಯನ್ನು ಆಶಾಭಾವದಿಂದ ನೋಡುತ್ತಿದ್ದಾರೆ. ಹೀಗಾಗಿ ಗಡಿಯಾಚೆ ಇರುವ ಕನ್ನಡಿಗರು ವಾಸಿಸುವ ಪ್ರದೇಶಗಳಲ್ಲಿ ಶಾಲೆಗಳ ಅಭಿವೃದ್ದಿಗೆ ವಿಶೇಷ ಅನುದಾನ ಮೀಸಲಿಡುವ ತೀರ್ಮಾನ ಮಾಡಿದ್ದೇವೆ ಎಂದು ಅವರು ವಿವರಿಸಿದರು.

ನೀರು ಸಿಗದಿದ್ದಕ್ಕೆ ಹಿಂದುಳಿದ ಪ್ರದೇಶವಾಗಿದೆ
ಮಲೆ ಮಹದೇಶ್ವರನ ಪುಣ್ಯ ಭೂಮಿ ಕರ್ನಾಟಕದ ಅತ್ಯಂತ ಅಭಿವೃದ್ಧಿಯಾಗಿರುವ ಭಾಗವಾಗಲಿದೆ. ಈ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಅಗತ್ಯ ಸಹಕಾರವನ್ನು ಸರ್ಕಾರ ನೀಡಲು ಸಿದ್ಧವಿದೆ. ಕೃಷಿ ಪ್ರಧಾನವಾಗಿರುವ ಈ ಭಾಗದಲ್ಲಿ ನೀರು ಕೊಟ್ಟರೆ, ಅದರ ಜೊತೆಗೆ ಶ್ರಮ ಸೇರಿದರೆ ಬಂಗಾರದ ಬೆಳೆ ತೆಗೆಯಬಹುದು. ಬರಗಾಲ ಪೀಡಿತ, ಹಿಂದುಳಿದ ಪ್ರದೇಶ ಎಂಬ ಜಿಲ್ಲೆಯ ಹಣೆಪಟ್ಟಿ ಬರಲು ಮುಖ್ಯ ಕಾರಣ ನೀರು ದೊರಕದೇ ಇರುವುದು ಎಂದರು.

6,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ಕಾರ್ಯಕ್ರಮಕ್ಕೆ ವಿಶೇಷ ಅನುದಾನ, 8000 ಶಾಲಾಕೊಠಡಿಗಳ ನಿರ್ಮಾಣ, 100 ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗಿದೆ. 6,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಅದರಲ್ಲಿ 3,000 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೊಳಿಸಿ ರಾಷ್ಟ್ರೀಯ ಹೆದ್ದಾರಿಗಳಿಗೆ ಜೋಡಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ, ಕರಾವಳಿ, ಗಡಿಭಾಗ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೊಳಿಸಲು ಡಬಲ್ ಇಂಜಿನ್ ಸರ್ಕಾರ ಶಕ್ತಿಯನ್ನು ತುಂಬಿದೆ ಎಂದು ಹೇಳಿದರು.

ಕಡತದಲ್ಲಿದ್ದ ಯೋಜನೆ ಜನರಿಗೆ ತಲುಪುತ್ತಿವೆ
ಅಮೃತ ಯೋಜನೆಯಡಿ ನಗರ ಪ್ರದೇಶದ ಅಭಿವೃದ್ಧಿಗೆ 7,000 ಕೋಟಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಈ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ 274 ಕೋಟಿ ರೂ. ಅಮೃತ್-2 ಯೋಜನೆಯಡಿ ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ರಾಜ್ಯ ಅಭಿವೃದ್ಧಿಯಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಪತ್ರದಲ್ಲಿದ್ದ ಸರ್ಕಾರಿ ಯೋಜನೆಗಳು ಭೌಧಿಕವಾಗಿ ಜನರಿಗೆ ತಲುಪುತ್ತಿವೆ ಎಂದು ಬಿಜೆಪಿ ಕಾರ್ಯವೈಖರಿ ಬಗ್ಗೆ ತಿಳಿಸಿದರು.

ಹಿಂದುಳಿದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಕಲ ಕ್ರಮ
ರಾಜ್ಯದಲ್ಲಿ ಅಭಿವೃದ್ಧಿ ನಿರಂತವಾಗಿ ನಡೆಯುತ್ತದೆ. ಹಿಂದುಳಿದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಕಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 7 ಕೆರೆ ತುಂಬಿಸುವ ಯೋಜನೆ ಪ್ರಮುಖವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆಗಳಲ್ಲಿ ಎಸ್‌ಸಿ, ಎಸ್ಟಿಗಳಿಗೆ ಪ್ರಾತಿನಿಧ್ಯ, ಆಸ್ಪತ್ರೆ ನಿರ್ಮಾಣ, ರೈತರಿಗೆ ಸಾಗುವಳಿ ಪತ್ರ ನೀಡಲು ಕಾನೂನು ಕ್ರಮ ಕೈಗೊಂಡಿದ್ದೇವೆ. ನೀರಾವರಿ ಯೋಜನೆಗೆ ಅನುದನ ಮಂಜೂರು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಶಾಸಕರಾದ ಎನ್.ಮಹೇಶ್, ನಿರಂಜನ್ ಕುಮಾರ್, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications