ಚಾಮರಾಜನಗರ ದಸರಾಕ್ಕೆ ಚಾಲನೆ: ಈ ಬಾರಿ ಸಂಭ್ರಮವಲ್ಲ..ಸಾಂಪ್ರದಾಯಿಕ ದಸರಾ
ಚಾಮರಾಜನಗರ, ಅಕ್ಟೋಬರ್ 17: ಇಂದಿನಿಂದ ಚಾಮರಾಜನಗರ ದಸರಾ ಆರಂಭಗೊಂಡಿದ್ದು, 4 ದಿನಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂದಿಕಂಬಕ್ಕೆ ಪೂಜೆ ಸಲ್ಲಿಸಿ ಚಾಮರಾಜನಗರ ದಸರಾಗೆ ಚಾಲನೆ ನೀಡಿದರು.
ಚಾಮರಾಜೇಶ್ವರ ದೇಗುಲ ಆವರಣದಲ್ಲಿ ಪ್ರಧಾನ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವರು ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಮರಿತಿಬ್ಬೇಗೌಡ ಈ ವೇಳೆ ಉಪಸ್ಥಿತರಿದ್ದರು.

ಸಂಭ್ರಮದ ದಸರಾವಲ್ಲ- ಸಾಂಪ್ರದಾಯಿಕ ದಸರಾ
ಚಾಮರಾಜನಗರ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿಯ ದಸರಾ ಸಂಭ್ರಮದ ದಸರಾವಲ್ಲ- ಸಾಂಪ್ರದಾಯಿಕ ದಸರಾ. ಮಳೆ ಅಭಾವ, ತಮಿಳುನಾಡಿನ ನೀರಿನ ಕ್ಯಾತೆಯಿಂದಾಗಿ ಸಂಭ್ರಮಪಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಹೇಳಿದರು.
ಈಗಾಗಲೇ ಮಳೆ ಇಲ್ಲದೇ ಬೆಳೆಗಳು ಒಣಗಿವೆ, ಮಳೆ ಬರದಿದ್ದರೇ ಮುಂದೆ ಕುಡಿಯುವ ನೀರಿಗೂ ತೊಂದರೆ ಉಂಟಾಗಲಿದೆ. ಚಾಮರಾಜೇಶ್ವರನಲ್ಲಿ ಬೇಡಿಕೊಂಡಿದ್ದೇನೆ. ಈಗ ಆಗುವ ಬೆಳೆನಷ್ಟ ಆಗಿ ಹೋಗಿದೆ ಆದ್ದರಿಂದ ಕುಡಿಯಲು ಕುಡಿಯುವ ನೀರಿಗೆ ಯಾವ ತೊಂದರೆಯೂ ಆಗದಂತೆ ಬೇಡಿಕೊಂಡಿದ್ದೇನೆ. ಜನರು ಕೂಡ ಉತ್ತಮ ಮಳೆಯಾಗಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು.
ನಮ್ಮ ಡ್ಯಾಂಗಳಲ್ಲಿ ನೀರಿಲ್ಲ, ತಮಿಳುನಾಡು ನೀರು ಕೊಡಿ ಎಂದು ಕೇಳುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡಿ ಎನ್ನುತ್ತಿದ್ದು ನಾವು ನೀರು ಬಿಡಲಾಗಲ್ಲ ಎಂದು ಮನವಿ ಮಾಡಿದರೂ ನಮ್ಮ ಮಾತನ್ನು ಅದು ಕೇಳಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಾಮರಾಜನಗರ ದಸರಾ ಪ್ರಯುಕ್ತ ನಗರದಲ್ಲಿ ಚಿತ್ರಕಲಾ ಪ್ರದರ್ಶನ, ದಸರಾ ಕವಿಗೋಷ್ಠಿ, ಮಹಿಳಾ ಸಂಘಗಳ ಉತ್ಪನ್ನಗಳ ಮಾರಾಟ ಮೇಳಗಳಿಗೆ ಸಚಿವರು ಚಾಲನೆ ನೀಡಿದರು.

ಅ. 18ರಂದು ಬೆಳಿಗ್ಗೆ 6.30 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಾಲಯ ಅವರಣದಲ್ಲಿ ದಸರಾ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. 10.30 ಗಂಟೆಗೆ ಮಹಿಳಾ ದಸರಾ ಕಾರ್ಯಕ್ರಮ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆಯಲಿದೆ.
11 ರಿಂದ 6 ಗಂಟೆಯವರೆಗೆ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಾಟಕೋತ್ಸವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.45ರವರೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅ. 19ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೈತ ದಸರಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 11 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. 11ರಿಂದ 6 ಗಂಟೆಯವರೆಗೆ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.45ರವರೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಅ. 20ರಂದು ಬೆಳಿಗ್ಗೆ 11ರಿಂದ 6 ಗಂಟೆಯವರೆಗೆ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.45ರವರೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7ಗಂಟೆಗೆ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications