Male Mahadeshwara Hill: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಮಲೆ ಮಾದಪ್ಪನ ಬೆಟ್ಟಕ್ಕೆ ಹರಿದುಬಂದ ಭಕ್ತರ ದಂಡು
ಚಾಮರಾಜನಗರ, ಜುಲೈ, 05: ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ದರ್ಶನಕ್ಕೆ ಭಕ್ತರ ದಂಡೇ ಹರಿದುಬಂದಿದೆ.
ಆಷಾಢ ಮಾಸ ಆರಂಭದ ಅಮಾವಾಸ್ಯೆ ಹಿನ್ನೆಲೆಯಲ್ಲೆ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲು ಜಿಲ್ಲೆ, ಹೊರ ಜಿಲ್ಲೆಗಳಿಂದ ಭಕ್ತರ ದಂಡೇ ಹರಿದುಬಂದಿದೆ. ಶಕ್ತಿ ಯೋಜನೆ ಹಿನ್ನೆಲೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದಿದ್ದು, ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ ಮಾದಪ್ಪನ ಬೆಟ್ಟದಲ್ಲಿ ಕಳೆಗಟ್ಟಿದೆ.

ಮಾದಪ್ಪನ ಬೆಟ್ಟದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಸಡಗರ: ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಣ್ಣೇತ್ತಿನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಉತ್ಸವಾದಿಗಳು ಸಂಪ್ರದಾಯದಂತೆ ಜರುಗಿದವು.
ಮಣ್ಣೇತ್ತಿನ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಮುಂಜಾನೆಯಿಂದಲೇ ಸ್ವಾಮಿಗೆ ಎಳನೀರಿನ ಅಭಿಷೇಕ ಹಾಲು ಪಂಚಾಮೃತ ಅಭಿಷೇಕ ನೆರವೇರಿತು. ನೈವೇದ್ಯ ಅರ್ಪಿಸಿದ ಬಳಿಕ ಮಹಾಮಂಗಳಾರತಿ ಮಾಡಲಾಯಿತು.
ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಸಾವಿರಾರು ಜನರು ಭೇಟಿ ನೀಡಿ ಮಹದೇಶ್ವರ ದರ್ಶನ ಪಡೆದರು. ಚಿನ್ನದ ರಥೋತ್ಸವ ಬೆಳ್ಳಿ ರಥೋತ್ಸವ ಬಸವ ವಾಹನ ಹುಲಿ ವಾಹನ ರುದ್ರಾಕ್ಷಿ ಮಂಟಪದ ಸೇವೆಗಳನ್ನು ಮಾಡುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು.
ಅಮಾವಾಸ್ಯೆ ಪೂಜೆ ಹಿನ್ನೆಲೆ ಬೆಂಗಳೂರು, ರಾಮನಗರ, ಕನಕಪುರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ನಂಜನಗೂಡು ತುಮಕೂರು ಕೋಲಾರ ಸೇರಿದಂತೆ ತಮಿಳುನಾಡು ರಾಜ್ಯದ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.
ಇರಲ್ಲದೆ 60 ವರ್ಷ ಮೇಲ್ಪಟ್ಟ ಭಕ್ತಾದಿಗಳಿಗೆ ರಾಜಗೋಪುರದ ಮುಖ್ಯ ದ್ವಾರದಲ್ಲಿ ನೇರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಸರತಿಸಾಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಎಣ್ಣೆ ಮಜ್ಜನ ದಿನವಾದ ಬುಧವಾರ ಸಂಜೆ ಬಿದ್ದ ಮಳೆಯ ನಡೆವೆಯೂ ಉಘೇ ಮಾದಪ್ಪ ಉಘೇ ಮಾಯಿಕರ ಎಂಬ ಘೋಷಣೆಯೊಂದಿಗೆ ಮಲೆ ಮಹದೇಶ್ವರ ದರ್ಶನ ಪಡೆದು ಪುನೀತರಾದರು.
ಭಕ್ತರಿಗೆ ವಿಶೇಷ ಪ್ರಸಾದ: ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ದಾಸೋಹ ಭವನದಲ್ಲಿ ಬಿಸಿಬೇಳೆ ಬಾತ್ ಸಿಹಿ ಪೊಂಗಲ್, ಪುಳಿಯೋಗರೆ ಚಿತ್ರಾನ್ನ, ಮಜ್ಜಿಗೆ ಹುಳಿ, ಟಮಟೋಬಾತ್ ಅನ್ನ ಸಾಂಬಾರ್, ಪಾಯಸ, ರಸಂ ಮಜ್ಜಿಗೆ ಪೊಂಗಲ್, ಕೇಸರಿಬಾತು, ಉಪ್ಪಿಟ್ಟು ಪ್ರಸಾದ ನೀಡಲಾಯಿತು.
ಪ್ರಸಾದ ಬಡಿಸಿದ ಕಾರ್ಯದರ್ಶಿ: ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ದಾಸೋಹ ಭವನಕ್ಕೆ ಸಾವಿರಾರು ಜನರು ಭೇಟಿ ನೀಡಿದ್ದ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ರವರು ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ಬಿಡಿಸಿದರು.
ಟ್ರಾಫಿಕ್ ಜಾಮ್: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಸಾವಿರಾರು ಜನರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ ಕಾರು ಗೂಡ್ಸ್ ವಾಹನ ಬಸ್ಸುಗಳಲ್ಲಿ ಆಗಮಿಸಿದ ಹಿನ್ನೆಲೆ ಆನೆ ತಲೆ ದಿಂಬದಲ್ಲಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು, ನಂತರ ವಾಹನ ಸವಾರರೆ ತಮ್ಮ ತಮ್ಮ ವಾಹನಗಳನ್ನು ಹಿಂದೆ ತೆಗೆದುಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.












Click it and Unblock the Notifications