ಬಂಡಿಪುರ ಅಭಯಾರಣ್ಯಕ್ಕೆ ಕಾಡ್ಗಿಚ್ಚು ಹತ್ತಿಕೊಂಡ್ರೆ ದೇವರೇ ಗತಿ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ 31: ಇಲ್ಲಿನ ಗುಂಡ್ಲುಪೇಟೆ ತಾಲೂಕಿನಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಬೇಸಿಗೆ ಬರುತ್ತಿದ್ದಂತೆಯೇ ಕಾಡ್ಗಿಚ್ಚಿನ ಭಯ ಆರಂಭವಾಗುತ್ತದೆ. ಆದರೆ ಅಗ್ನಿ ಅನಾಹುತಗಳನ್ನು ತಡೆಯಬೇಕಾದ ಅಗ್ನಿ ಶಾಮಕದಳದವರು ಮಾತ್ರ ಸಮಸ್ಯೆಗಳಲ್ಲೇ ಮುಳುಗಿದ್ದು, ಕಾಡ್ಗಿಚ್ಚು ಹತ್ತಿಕೊಂಡರೆ ಕೈಕಟ್ಟಿ ಕೂರಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಗುಂಡ್ಲುಪೇಟೆ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ ಸಮಸ್ಯೆ ಜೋರಾಗಿದೆ. ಇಲ್ಲಿ ಅಧಿಕಾರಿಯೂ ಸೇರಿದಂತೆ 27 ಮಂದಿ ಕಾರ್ಯ ನಿರ್ವಹಿಸಬೇಕು. ಆದರೆ ಅಷ್ಟು ಮಂದಿಯ ಕೆಲಸವನ್ನು ಕೇವಲ 8 ಮಂದಿ ಮಾಡುತ್ತಿದ್ದಾರೆ.[ಕೊಳ್ಳೇಗಾಲದ ಮಾಟಳ್ಳಿಯಲ್ಲಿ ಕೇಳುವುದು ಬರೀ ಸಾವಿನ ಸದ್ದು!]

Lots of problems in Gundlupete fire station

ಇನ್ನೊಂದು ಕಡೆ ಬೆಂಕಿ ನಂದಿಸಲು ಬೇಕಾದ ನೀರಿಗೆ ಬರ ಬಂದಿದೆ. ಮೊದಲೆಲ್ಲ ಠಾಣೆಯ ಆವರಣದಲ್ಲಿರುವ ಕೊಳವೆ ಬಾವಿಯಿಂದ ನೀರನ್ನು ತುಂಬಿಸಲಾಗುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದ ಕಾರಣ ಅಂತರ್ಜಲದ ಮಟ್ಟ ಕುಸಿದಿದೆ. ನೀರಿಗಾಗಿ ಪುರಸಭೆಗೆ ಮನವಿ ಮಾಡಿದರೂ ಠಾಣೆಯ ಆವರಣಕ್ಕೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಇದರಿಂದಾಗಿ ಠಾಣೆಯಿಂದ 15 ಕಿ.ಮೀ. ದೂರದಲ್ಲಿರುವ ಬೆಳಚಲವಾಡಿ ಗೇಟ್ ಬಳಿಯ ಜಲ ಸಂಗ್ರಹಾಗಾರದಿಂದ ನೀರು ತುಂಬಿಸಿಕೊಳ್ಳಬೇಕಾಗಿದೆ.

Lots of problems in Gundlupete fire station

ಗುಂಡ್ಲುಪೇಟೆ ಸುತ್ತಮುತ್ತ ಸಂಭವಿಸುತ್ತಿದ್ದ ಅಗ್ನಿ ಅನಾಹುತಗಳನ್ನು ಮನಗಂಡು 1997ರಲ್ಲಿ ಅಗ್ನಿಶಾಮಕದ ದಳದ ಠಾಣೆಯನ್ನು ಇಲ್ಲಿ ಆರಂಭಿಸಲಾಯಿತು. ಅಗ್ನಿಶಾಮಕ ಠಾಣೆಗಾಗಿಯೇ 2008ರಲ್ಲಿ ಕೇರಳ ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಠಾಣೆಗೆ ತುರ್ತು ಸಂದರ್ಭಗಳಲ್ಲಿ ಬೆಂಕಿಯನ್ನು ನಂದಿಸಲೆಂದು ಎರಡು ವಾಹನಗಳನ್ನು ನೀಡಲಾಗಿತ್ತು. ಆದರೆ ಅದರಲ್ಲಿ ಒಂದು ಕೆಟ್ಟು ನಿಂತಿದೆ. ಮತ್ತೊಂದು ಸುಸ್ಥಿತಿಯಲ್ಲಿದೆಯಾದರೂ ಅದಕ್ಕೆ ನೀರು ತುಂಬಿಸುವುದೇ ಸದ್ಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.[ಬಂಡೀಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು]

Lots of problems in Gundlupete fire station

ಈಗಾಗಲೇ ಕೆಲ ದಿನಗಳ ಹಿಂದೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡು ಕುರುಚಲು ಕಾಡು ನಾಶವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಡ್ಗಿಚ್ಚುಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾಡ್ಗಿಚ್ಚು ಕಾಣಿಸಿಕೊಂಡರೆ ಏನು ಮಾಡುವುದು ಎಂದು ಅಗ್ನಿ ಶಾಮಕ ದಳ ಸಿಬ್ಬಂದಿಗಳು ಚಿಂತಿತರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As Bandipur fire station is facing lots pf problem, its very difficult to tackle wildfire in Bandipur National Park.
Please Wait while comments are loading...