ಕೊಳ್ಳೇಗಾಲದ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ: ಕಡತಗಳ ಜಪ್ತಿ
ಚಾಮರಾಜನಗರ, ಡಿಸೆಂಬರ್, 15: ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆ ಮತ್ತು ನಗರಸಭೆ ಕಚೇರಿಗಳಿಗೆ ಲೋಕಾಯುಕ್ತ ಸಿಬ್ಬಂದಿ ದಿಢೀರ್ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ಸಿಬ್ಬಂದಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದ್ದಾರೆ
ಸಾಮಾಜಿಕ ಕಾರ್ಯಕರ್ತ ಧಶರಥ್ ಹಾಗೂ ನಗರ ಸಭೆ ಸದಸ್ಯೆ ಜಯಮೇರಿ ನೀಡಿದ ದೂರಿನನ್ವಯ ನಗರಸಭೆ ಹಾಗೂ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಎಸ್.ಟಿ. ಒಡೆಯರ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ದಾಳಿ ವೇಳೆ ಹಲವು ಕಡತಗಳನ್ನು ಜಪ್ತಿ ಮಾಡಿಕೊಂಡು ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗದಲ್ಲೂ ಲೋಕಾಯುಕ್ತ ದಾಳಿ
ಕಳೆದ ನವೆಂಬರ್ ತಿಂಗಳಲ್ಲಿ ಚಿಕನ್ ಅಂಗಡಿ ಮಾಲೀಕನಿಂದ ಲಂಚ ಪಡೆಯುತ್ತಿದ್ದ ವೇಳೆ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಲಂಚದ ಹಣ ಸುಡಲು ಯತ್ನಿಸಿದ ಘಟನೆ ನಡೆದಿದೆ. ಜೋಗ ಗ್ರಾಮದ ಚಿಕನ್ ಅಂಗಡಿ ಮಾಲೀಕ ಅಹ್ಮದ್ ಅಬ್ದುಲ್ ಬಾಕಿ ಎಂಬುವವರಿಂದ ಲಂಚ ಪಡೆಯುತ್ತಿದ್ದ ವೇಳೆ ಹರೀಶ್ ಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಜೋಗ ಗ್ರಾಮದಲ್ಲಿ ಅಹ್ಮದ್ ಅಬ್ದುಲ್ ಬಾಕಿ ಸುಮಾರು 15 ವರ್ಷಗಳಿಂದ ಚಿಕನ್ ಅಂಗಡಿ ನಡೆಸುತ್ತಿದ್ದಾರೆ. ಪರವಾನಗಿ ಪಡೆಯದೆ ಅಂಗಡಿ ನಡೆಸುತ್ತಿರುವುದರಿಂದ ತೆರವುಗೊಳಿಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ ಅಹ್ಮದ್ ಅಬ್ದುಲ್ ಅವರು ಪರವಾನಗಿಗೆ ಅರ್ಜಿ ಸಲ್ಲಿಸಿದ್ದರು. ಸಮಸ್ಯೆಯ ಕುರಿತು ತಮ್ಮ ವಾರ್ಡ್ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ.ಹರೀಶ್ ಗೌಡ ಬಳಿ ತಿಳಿಸಿದ್ದರು.

50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ
ಅಂಗಡಿ ನಡೆಸಲು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು, ಪ್ರತಿ ತಿಂಗಳು 3 ಸಾವಿರ ರೂ. ಹಣ ನೀಡಬೇಕು ಎಂದು ಹರೀಶ್ ಗೌಡ ಸೂಚಿಸಿದ್ದಾರೆ. ಇದು ಕಷ್ಟವಾಗಲಿದೆ ಎಂದು ಅಹ್ಮದ್ ಅಬ್ದುಲ್ ತಿಳಿಸಿದ್ದಾರೆ. ಆಗ 50 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎನ್ನುವ ಮಾಹಿತಿ ಹೊರಬಿದ್ದಿತ್ತು. ಲಂಚಕ್ಕೆ ಬೇಡಿಕೆಯಿಟ್ಟ ಹಿನ್ನೆಲೆ ಅಹ್ಮದ್ ಅಬ್ದುಲ್ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಹರೀಶ್ ಗೌಡ ವಿರುದ್ಧ ದೂರು ನೀಡಿದ್ದರು.

ಹರೀಶ್ ಗೌಡ ಮನೆ ಮೇಲೆ ದಾಳಿ
ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಗೌಡ ಮನೆಗೆ ತೆರಳಿ 50 ಸಾವಿರ ರೂಪಾಯಿ ಲಂಚದ ಹಣ ನೀಡಿದ್ದಾರೆ. ಹರೀಶ್ ಗೌಡ ಹಣ ಪಡೆಯುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ಆತನ ಮನೆ ಮೇಲೆ ದಾಳಿ ನಡೆಸಿದ್ದರು. ವಿಚಲಿತನಾದ ಆತ ಹಣವನ್ನು ಮನೆಯಲ್ಲಿದ್ದ ಗ್ಯಾಸ್ ಸ್ಟೌ ಮೇಲೆ ಇಟ್ಟು ಬೆಂಕಿ ಹೊತ್ತಿಸಿದ್ದಾನೆ. ಆಗ ಹರೀಶ್ ಗೌಡನನ್ನು ಲೋಕಾಯುಕ್ತ ಪೊಲೀಸ್ ಬಂಧಿಸಿದ್ದರು. ಶಿವಮೊಗ್ಗ ಲೋಕಾಯುಕ್ತ ಡಿ.ವೈ.ಎಸ್.ಪಿ ಮೃತ್ಯುಂಜಯ.ಎನ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ರಾಧಾಕೃಷ್ಣ, ಇನ್ಸ್‌ಪೆಕ್ಟರ್ ಎಚ್.ಎಂ.ಜಗನ್ನಾಥ, ಸಿಬ್ಬಂದಿ ಪ್ರಸನ್ನ, ಬಿ.ಲೋಕೇಶಪ್ಪ, ಮಹಾಂತೇಶ, ಚನ್ನೇಶ, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ತರುಣ್ ಕುಮಾರ್, ಪ್ರದೀಪ್ ಕುಮಾರ್ ಪಾಲ್ಗೊಂಡಿದ್ದರು.












Click it and Unblock the Notifications