ಗುಂಡ್ಲುಪೇಟೆಯ ಮಾದಾಪಟ್ಟಣದಲ್ಲಿ ಭಯ ಸೃಷ್ಟಿಸಿದ ಚಿರತೆ
ಗುಂಡ್ಲುಪೇಟೆ, ಜುಲೈ 4: ಕೃಷಿ ಕಾರ್ಯಕ್ಕೆಂದು ಜಮೀನಿಗೆ ತೆರಳಿದ ರೈತರಿಗೆ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಗೊಂಡ ಘಟನೆ ತಾಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಮಾದಪ್ಪ ಎಂಬುವರು ತಮ್ಮ ಜಮೀನಿನ ಕೃಷಿ ಹೊಂಡದಲ್ಲಿ ಶೇಖರಿಸಿದ್ದ ನೀರನ್ನು ಬೆಳೆಗೆ ಹಾಯಿಸಲು ತೆರಳಿದ ಸಂದರ್ಭದಲ್ಲಿ ನೀರನ್ನು ಕುಡಿದು ತೆರಳಿರುವ ಚಿರತೆ ಹೆಜ್ಜೆ ಗುರುತನ್ನು ನೋಡಿ, ಆತಂಕಗೊಂಡಿದ್ದಾರೆ. ಆ ನಂತರ ಅವರು ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಗ್ರಾಮಸ್ಥರು ಬಂದು ಪರಿಶೀಲಿಸಿದಾಗ ಹೆಜ್ಜೆ ಗುರುತು ಜಮೀನಿನ ಬೇಲಿಯವರೆಗೂ ಕಂಡುಬಂದಿದೆ. ಹೀಗಾಗಿ ಚಿರತೆಯು ಬೇಲಿಯಲ್ಲಿ ಅವಿತಿರಬಹುದೆಂಬ ಶಂಕೆ ವ್ಯಕ್ತಪಡಿಸಿ, ಈ ಕುರಿತು ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಆದರೆ, ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಪ್ರಯತ್ನವನ್ನು ಮಾಡಿಲ್ಲ. ಇದೀಗ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಭಯದ ವಾತಾವರಣ ನಿರ್ಮಾಣವಾಗಿದೆ. ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಈ ಕೂಡಲೇ ಅರಣ್ಯ ಇಲಾಖೆಯವರು ಭೇಟಿ ನೀಡಿ, ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಡುವಂತೆ ಗ್ರಾಮದ ರೈತರಾದ ಗುರುಸ್ವಾಮಿ, ಶಿವಸ್ವಾಮಿ, ಸ್ವಾಮಿ ಮೊದಲಾದವರು ಮನವಿ ಮಾಡಿದ್ದಾರೆ.












Click it and Unblock the Notifications