ಸಿದ್ದು, ಡಿಕೆಶಿ ಇಬ್ಬರ ಕೈಯಲ್ಲೂ ಚೂರಿ ಇದೆ, ಚುಚ್ಚಲು ಕಾಯುತ್ತಿದ್ದಾರೆ: ಈಶ್ವರಪ್ಪ ವ್ಯಂಗ್ಯ
ಬಲವಂತದಿಂದ ಅಪ್ಪಿಕೊಂಡ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೈಯಲ್ಲಿ ಚಾಕು ಇದೆ, ಚುಚ್ಚೋದಕ್ಕೆ ಕಾಯುತ್ತಿದ್ದಾರೆ ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರ, ಮಾರ್ಚ್2: ರಾಹುಲ್ ಗಾಂಧಿ ಬಲವಂತದಿಂದ ಒಬ್ಬರಿಗೊಬ್ಬರು ಅಪ್ಪಿಕೊಂಡರು ಅಷ್ಟೇ ಆದರೆ ಇಬ್ಬರ ಕೈಯಲ್ಲೂ ಚಾಕು ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಲವಂತದಿಂದ ಅಪ್ಪಿಕೊಂಡ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೈಯಲ್ಲಿ ಚಾಕು ಇದೆ, ಚುಚ್ಚೋದಕ್ಕೆ ಕಾಯುತ್ತಿದ್ದಾರೆ ಅಷ್ಟೇ, ಸಿದ್ದು ಸಿಎಂ ಎಂದು ಘೋಷಣೆ ಕೂಗಿದರೇ ಡಿಕೆಶಿ ಸಿಡಿಮಿಡಿಯಾಗುತ್ತಾರೆ, ಡಿಕೆಶಿ ಸಿಎಂ ಎಂದರೆ ಖುಷಿಯಾಗುತ್ತಾರೆ, ಕಾಂಗ್ರೆಸ್‌ನಲ್ಲಿ ಎರಡು ಬಣಗಳಿದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ತಾವೊಬ್ಬರು ಮಾತ್ರ ಹಿಂದುಳಿದ, ದಲಿತರ ನಾಯಕ ಎಂದುಕೊಂಡಿದ್ದಾರೆ. ಆದರೆ, ದಲಿತ ಮುಖಂಡ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಮುನಿಯಪ್ಪ ಅವರನ್ನು ಸೋಲಿಸಿದ್ದು, ಸಿದ್ದರಾಮಯ್ಯ ಶಿಷ್ಯರೇ ಅಲ್ಲವೇ? ಅವರ ಸೋಲಿಗೆ ಯಾರು ಕಾರಣ ಎಂದು ಹೇಳಲಿ? ದಲಿತ ನಾಯಕರು, ಹಿಂದುಳಿದ ನಾಯಕರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ 224 ಕ್ಷೇತ್ರದಿಂದಲೂ ನಿಂತುಕೊಳ್ಳಬಹುದು ಎನ್ನುತ್ತಾರೆ. ಆದರೆ ಯಾಕೆ ಅವರು ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಲ್ಲ, ಬಾದಾಮಿಯಲ್ಲಿ ಏಕೆ ನಿಲ್ಲಲ್ಲ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ತಾವು ಹಿಂದುಳಿದ ವರ್ಗದ ಚಾಂಪಿಯನ್ ಎಂದುಕೊಳ್ಳುವ ಸಿದ್ದರಾಮಯ್ಯ ಅನೇಕ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಬಜೆಟ್ ಗಾತ್ರ ಎಷ್ಟು? ಹಿಂದುಳಿದ ವರ್ಗಕ್ಕೆ, ದಲಿತರಿಗೆ ಕೊಟ್ಟ ಅನುದಾನ ಎಷ್ಟು ಹಾಗೂ ಸಿದ್ದರಾಮಯ್ಯ ಕೊಟ್ಟ ಹಣ, ಬಜೆಟ್ ಗಾತ್ರ ಎಷ್ಟು ಎಂದು ಅಂಕಿ ಅಂಶದ ಮೂಲಕ ಬಹಿರಂಗವಾಗಿ ಹೇಳಲಿ, ಹೋದಲೆಲ್ಲಾ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ. 5 ವರ್ಷಗಳ ಕಾಲ ಸಿಎಂ ಆಗಿದ್ದೇ ಅವರಿಗೆ ಹೆಮ್ಮೆ ಮತ್ಯಾಕೆ ಸೋತರು? ಅವರ ಮಂತ್ರಿಗಳು ಯಾಕೆ ಸೋತರು ಎಂದು ಲೇವಡಿ ಮಾಡಿದ್ದಾರೆ.

ಉಚಿತ ವಿದ್ಯುತ್, ಗೃಹಲಕ್ಷ್ಮಿ ಹಣ ಎಂದು ಕಪಟ ಘೋಷಣೆಗಳನ್ನು ಮಾಡುತ್ತಿದ್ದಾರೆ. ಜನರು ಒಂದು ಬಾರಿ ಮರಳಾಗಬಹುದು, ಎರಡು ಬಾರಿ ಮರಳುಗಾಬಹುದು, ಆದರೆ ಪದೇ ಪದೇ ಮರಳಾಗುವುದಿಲ್ಲ ಕಾಂಗ್ರೆಸ್ ಅಧಿಕಾರ ಹಿಡಿಯಲ್ಲ, ಈ ಬಾರಿ ಬಿಜೆಪಿ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ನಾಯಕರು ಹೇಳಿದ ಕಡೆ ಚುನಾವಣೆಗೆ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೋಲಾರದಲ್ಲಿ ನಿಲ್ಲಲಿ ಎಂದು ಹೈಕಮಾಂಡ್ ನಾಯಕರು ಹೇಳಿದ್ದಾರಾ?, ಬಾದಾಮಿಯಲ್ಲಿ ನಿಲ್ಲಬೇಡ ಎಂದು ಹೇಳಿದ್ದಾರಾ? ಪ್ರಜಾಧ್ವನಿ ಯಾತ್ರೆ ವೇಳೆ ಅವರವರೇ ಟಿಕೆಟ್ ಘೋಷಣೆ ಮಾಡುತ್ತಿದ್ದಾರೆ. ಹಾಗಾದರೆ ಸಂಸದೀಯ ಮಂಡಲಿ ಇರುವುದು ಯಾಕೆ? ನನಗೆ ಆಶೀರ್ವಾದ ಮಾಡಿ ಎಂದು ಡಿಕೆಶಿ ಹೇಳಿಕೊಂಡು ಬರುತ್ತಿದ್ದಾರೆ, ಒಕ್ಕಲಿಗರು ಹುಟ್ಟಿರುವುದು ಬರೀ ಡಿಕೆಶಿ ಅವರನ್ನು ಸಿಎಂ ಮಾಡಲು ಮಾತ್ರವೇ? ಎಂದು ಆಕ್ರೋಶ ಹೊರಹಾಕಿದರು.
ಸಿದ್ದರಾಮಯ್ಯ ಮಿಮಿಕ್ರಿ ಕಲಾವಿದ ಆಗಬೇಕಿತ್ತು
ಮಾತು ಮುಂದುವರಿಸಿದ ಕೆ.ಎಸ್ ಈಶ್ವರಪ್ಪ, ಬಾಹಿಯೋ ಬೆಹನ್ ಎಂದು ಕೈ ಅಲ್ಲಾಡಿಸುವ ಸಿದ್ದರಾಮಯ್ಯ ಮಿಮಿಕ್ರಿ ಕಲಾವಿದ ಆಗಬೇಕಿತ್ತು, 28ಕ್ಕೆ 28 ಸಂಸದ ಸ್ಥಾನ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದರು ಅವರ ಹಣೆಬರಹಕ್ಕೆ 1 ಸೀಟ್ ಗೆದ್ದರು, ಮೈಕ್ ಹಾಕಿ ಕೂಗಿದರೂ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜನರು ಬರುತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.
ಇನ್ನು ತಮ್ಮ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ಅವರು, ನಾನು ಮಂತ್ರಿ ಸ್ಥಾನ ಸಿಗಲಿಲ್ಲ ಎಂಬುದಕ್ಕೆ ನಾನೇನು ನಿರಾಶೆಗೊಂಡಿಲ್ಲ, ಕಾಲ ಬಂದಾಗ ಸ್ಥಾನಮಾನ ಸಿಗಲಿದೆ. ನಿರಾಶೆಗೊಳಗಾದವನು ರಾಜಕಾರಣಿಯೇ ಅಲ್ಲ ಎಂದು ಹೇಳಿದರು.












Click it and Unblock the Notifications