Assembly elections 2023: ಚಾಮರಾಜನಗರದಲ್ಲಿ ಅಬಕಾರಿ ಇಲಾಖೆ ಹೈ ಅಲರ್ಟ್, ಇದುವರೆಗೂ ಯಾವೆಲ್ಲ ಸ್ಥಳಗಳಲ್ಲಿ ದಾಳಿ?
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ರಾಜಕೀಯ ಪಕ್ಷಗಳಿಂದ ಮದ್ಯ, ಹಣ ಹಂಚುವ ಕಾರ್ಯ ಹೆಚ್ಚಾಗಿದೆ. ಇದನ್ನರಿತ ಚಾಮರಾಜನಗರ ಅಬಕಾರಿ ಇಲಾಖೆಯು ಹೈ ಅಲರ್ಟ್ ಆಗಿದ್ದು, ಕಾರ್ಯಾಚರಣೆ ಮುಂದುವರೆಸಿದೆ.
ಚಾಮರಾಜನಗರ, ಮಾರ್ಚ್, 21: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಮದ್ಯ, ಹಣ ಹಂಚುವ ಕಾರ್ಯ ಹೆಚ್ಚಾಗಿದೆ. ಇದನ್ನರಿತ ಚಾಮರಾಜನಗರ ಅಬಕಾರಿ ಇಲಾಖೆಯು ಹೈ ಅಲರ್ಟ್ ಆಗಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಚುನಾವಣೆ ಹತ್ತಿರ ಬಂತೆಂದರೆ ಸಾಕು ಮದ್ಯ, ಹಣ ಹಂಚುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಎಚ್ಚೆತ್ತ ಅಬಕಾರಿ ಇಲಾಖೆ ಈಗಿನಿಂದಲೇ ಕಾರ್ಯಚರಣೆ ಮುಂದುವರೆಸಿದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು, ಅಕ್ರಮ ಮದ್ಯ ಹಂಚಿಕೆ ಆಗಬಾರದೆಂದು ಈಗಿನಿಂದಲೇ ಅಲರ್ಟ್ ಆಗಿರುವ ಅಬಕಾರಿ ಇಲಾಖೆ ಕಳೆದ ಒಂದು ತಿಂಗಳಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 115 ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ 58 ಜನರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

115 ಕಡೆ ಅಬಕಾರಿ ಅಧಿಕಾರಿಗಳ ದಾಳಿ
ಕಳೆದ ಫೆಬ್ರವರಿ 19 ರಿಂದ ಮಾರ್ಚ್ 20ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಒಟ್ಟು 115 ಕಡೆ ದಾಳಿ ನಡೆಸಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 58 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಸಂಬಂಧ 85 ಪ್ರಕರಣಗಳು ಕೂಡ ದಾಖಲಾಗಿದ್ದು, ಕಾರ್ಯಾಚರಣೆ ವೇಳೆ 96 ಲೀಟರ್ ಮದ್ಯ 1 ಲೀಟರ್ ಬಿಯರ್ ಸೇರಿದಂತೆ 3 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಬಕಾರಿ ಅಧಿಕಾರಿಗಳಿಂದ ದಿಢೀರ್ ದಾಳಿ
ವಶಪಡಿಸಿಕೊಂಡ ಮದ್ಯ, ವಾಹನಗಳ ಒಟ್ಟು ಮೌಲ್ಯವೂ ಒಂದೂವರೆ ಲಕ್ಷ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಹಳೇ ಹಾಗೂ ಹೊಸ ಆರೋಪಿಗಳು ಸೇರಿದಂತೆ ಒಟ್ಟು 40 ಆರೋಪಿಗಳಿಂದ ಬಾಂಡ್ ಅನ್ನು ಅಬಕಾರಿ ಇಲಾಖೆ ಪಡೆದಿದೆ. ಅಷ್ಟೇ ಅಲ್ಲದೇ ಕೊಳ್ಳೇಗಾಲ ತಾಲೂಕಿನಲ್ಲಿ 10, ಚಾಮರಾಜನಗರ ತಾಲೂಕಿನಲ್ಲಿ 12, ಗುಂಡ್ಲುಪೇಟೆ ತಾಲೂಕಿನಲ್ಲಿ 14 ಸೂಕ್ಷ್ಮ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.
ಯಳಂದೂರಿನ ಗುರುಕೃಪ ವೈನ್ಸ್ ಎಂಬ ಸನ್ನದಿಗೆ ದಿಢೀರ್ ದಾಳಿ ನಡೆಸಿ ದಾಸ್ತಾನು ಸಂಖ್ಯೆ ತಾಳೆಯಾಗದಿರುವುದರಿಂದ 1555 ಲೀಟರ್ ಮದ್ಯ, 670 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 8 ಲಕ್ಷ ರೂಪಾಯಿ ಎಂದು ಅಬಕಾರಿ ಆಯುಕ್ತರಾದ ನಾಗಶಯನ ಮಾಹಿತಿ ನೀಡಿದ್ದಾರೆ.
ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ
ಇದೇ ರೀತಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧದ ಭರವಸೆ ನೀಡುವ ಅಭ್ಯರ್ಥಿಗೆ ಬೆಂಬಲ ನೀಡಲು ಮಹಿಳೆಯರು ಮುಂದಾಗಿದ್ದರು. ಹೀಗಾಗಿ ಮದ್ಯ ನಿಷೇಧ ಆಂದೋಲನದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮೋಕ್ಷಮ್ಮ ತಿಳಿಸಿದ್ದರು.
ಮಾರ್ಚ್ 15ರಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಕಳೆದ 7 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ದಾಖಲೆ ಸಮೇತ ಪಟ್ಟಿ ನೀಡಿದರೂ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.
ಅಕ್ರಮ ಮದ್ಯ ಮಾರಾಟ ತಡೆಯುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿದ್ದರೂ, ಸರ್ಕಾರ ಮಾತ್ರ ಮದ್ಯ ಮಾರಾಟದಿಂದ ಬರುವ ಆದಾಯ ನಂಬಿಕೊಂಡು ಲಕ್ಷಾಂತರ ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಕ್ರಮ ಮದ್ಯ ಮಾರಾಟ ತಡೆಗೆ ಸರ್ಕಾರ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕು. ಸಮಿತಿಗೆ ಅರೆ ನ್ಯಾಯಾಂಗ ಅಧಿಕಾರವನ್ನು ನೀಡಬೇಕು. ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಹಳ್ಳಿಗಳಲ್ಲಿಅಕ್ರಮ ಮದ್ಯ ಮಾರಾಟ ನಿಲ್ಲಿಸಲು ವಿಶೇಷ ಗ್ರಾಮ ಸಭೆ ಮಾಡಿ, ಅಕ್ರಮ ಮದ್ಯ ಮಾರಾಟ ತಡೆಯುವ ಅಧಿಕಾರ ಗ್ರಾಮ ಪಂಚಾಯಿತಿಗೆ ನೀಡಬೇಕು. ಸಭೆಯಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications