ತಮಿಳುನಾಡಿನಲ್ಲಿ ಕನ್ನಡಿಗರ ವಿಶೇಷ ಆಚರಣೆ- ಸಗಣಿಯಲ್ಲಿ ಹೊಡೆದಾಡಿಕೊಂಡು ಸಂಭ್ರಮಿಸಿದ ಜನ!

ಚಾಮರಾಜನಗರ ನವೆಂಬರ್ 3: ಪ್ರತೀ ವರ್ಷ ಬಲಿಪಾಡ್ಯಮಿ ಮಾರನೆ ದಿನ ತಮಿಳುನಾಡಿನ ಗುಮಟಾಪುರದಲ್ಲಿ ವಿಶೇಷ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆ ಗೊರೆ ಹಬ್ಬ ಎಂದು ಹೆಸರು. ಈ ದಿನ ಜನ ಸಗಣಿಯಲ್ಲಿ ಹೊಡೆದಾಡಿಕೊಳ್ಳುತ್ತಾರೆ. ಅಚ್ಚರಿ ಎನಿಸಿದರೂ ಇದು ನಿಜ. ಹಾಗಾದರೆ ಈ ಹಬ್ಬದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಚಾಮರಾಜನಗರ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ಗುಮಟಾಪುರದಲ್ಲಿ ಕನ್ನಡಿಗರು ಇಂದು ಗೊರೆ ಹಬ್ಬವನ್ನು ಆಚರಿಸಿದರು. ಇಂದು ಮಧ್ಯಾಹ್ನ 3ಗಂಟೆಯಿಂದ ಗೊರೆ ಹಬ್ಬದ ಸಂಭ್ರಮದಲ್ಲಿ ಕನ್ನಡಿಗರು ತೇಲಾಡಿದ್ದಾರೆ. ಬಲಿಪಾಡ್ಯಮಿ ಮಾರನೆ ದಿನ ನಡೆಯುವ ಈ ಹಬ್ಬದಲ್ಲಿ ಸಗಣಿಯಲ್ಲಿ ಹೊಡೆದಾಡಿಕೊಳ್ಳುವುದೇ ವಿಶೇಷ ಆಚರಣೆಯಾಗಿದೆ. ವಯಸ್ಸಿನ ಬೇಧವಿಲ್ಲದೆ ಕಿರಿಯರು, ಹಿರಿಯರು, ಯುವಕರು ದಪ್ಪ ಸಗಣಿ ಉಂಡೆಗಳನ್ನು ಒಬ್ಬರಿಗೊಬ್ಬರು ಹೊಡೆದುಕೊಂಡು ಗಮನ ಸೆಳೆದರು. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ.

Kannadigaru celebrated Gore festival today on the border of Chamarajanagar district

ಸಗಣಿಯ ದೊಡ್ಡ ದೊಡ್ಡ ಮುದ್ದೆಗಳನ್ನು ಕಟ್ಟುವ ರೀತಿ, ಅದನ್ನು ಪ್ರಾಯಾಸದಿಂದ ಮೇಲಕ್ಕೆತ್ತಿ ಮತ್ತೊಬ್ಬರ ಮೇಲೆ ಎತ್ತಿ ಹಾಕುವ ದೃಶ್ಯ ರೋಮಾಂಚಕವಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ನಡೆಯುವ ಈ ಸಗಣಿಯಾಟವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು, ಬೇರೆ ಜಿಲ್ಲೆಯ ಜನರೂ ಜಮಾಯಿಸಿದ್ದರು. ಸುತ್ತಲು ನೆರೆಯುವ ಜನರ ಮುಗಿಲು ಮುಟ್ಟುವ ಕಿರುಚಾಟ, ಘೋಷಣೆಗಳು ಗೊರೆ ಕಟ್ಟುವವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಧಾರ್ಮಿಕ ನಂಬಿಕೆ ಸಾರುವ ಹಬ್ಬ:

ಹೀಗೆ ಸಗಣಿಯಿಂದ ಹೊಡೆದಾಡಿದರೆ ಚರ್ಮದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಜನರಲ್ಲಿ ಇದೆ. ಬೀರೇಶ್ವರನಿಗೆ ಹರಕೆ ಹೊತ್ತವರು ಸಹ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ತಮ್ಮ ಮನದ ಬಯಕೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಈ ಹಬ್ಬ ಆಚರಿಸಲು ಒಂದು ಹಿನ್ನಲೆಯು ಇದೆ.

Kannadigaru celebrated Gore festival today on the border of Chamarajanagar district

ಅದೇನೆಂದರೆ ಹಿಂದೆ ಊರ ಗೌಡರ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿ ಮಹಾಶಿವಭಕ್ತನಾಗಿದ್ದನಂತೆ. ಆತನ ಮರಣ ನಂತರ ಆತನ ವಿಭೂತಿ, ರುದ್ರಾಕ್ಷಿ ಹಾಗು ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತಂತೆ. ಕಾಲಾನಂತರ ಗೊಬ್ಬರಕ್ಕಾಗಿ ತಿಪ್ಪೆ ಅಗೆಯುತ್ತಿದ್ದಾಗ ಆ ಸ್ಥಳದಲ್ಲಿ ಲಿಂಗವೊಂದು ಉದ್ಭವವಾಗಿರುವುದು ಗೋಚರಿಸಿತು. ನಂತರ ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಅಂದಿನಿಂದ ಪ್ರತಿ ವರ್ಷ ಇಲ್ಲಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.

ಸಗಣಿಯಾಟದಲ್ಲಿ ಜಾತಿ ಬೇಧ ಹಾಗೂ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಸಗಣಿಯಾಟಕ್ಕು ಮೊದಲು ದಲಿತ ವ್ಯಕ್ತಿಯೇ ಮೊದಲ ಪೂಜೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಹೀಗೆ ಪ್ರತಿ ವರ್ಷ ತಪ್ಪದೆ ಗೊರೆಹಬ್ಬ ಮಾಡುವುದರಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ. ಮಳೆಬೆಳೆ ಚನ್ನಾಗಿ ಆಗುತ್ತದೆ ಎಂಬ ನಂಬಿಕೆಯು ಇದೆ. ಮೇಲುನೋಟಕ್ಕೆ ವಿಚಿತ್ರ ಸಂಪ್ರದಾಯದಂತೆ ಕಂಡು ಬರುವ ಈ ಆಚರಣೆಯ ಹಿಂದೆ ಧಾರ್ಮಿಕ ನಂಬಿಕೆ ಇದ್ದೂ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ.

ದೀಪಾವಳಿ ಸಡಗರದ ಬಳಿಕ ಗಡಿನಾಡ ಕನ್ನಡಿಗರು ಆಚರಿಸುವ ಈ ವಿಶೇಷ ಸಗಣಿ ಹಬ್ಬ ಸುತ್ತಮುತ್ತಲಿನ ಗ್ರಾಮಸ್ಥರನ್ನು ಆಕರ್ಷಿಸುವುದಂತೂ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+