ಕಾವೇರಿ ಕಿಚ್ಚು: ಚಾಮರಾಜನಗರದಲ್ಲಿ ಐಸ್ ತಟ್ಟೆ ತಲೆ ಮೇಲೆ ಹೊತ್ತು ಪ್ರತಿಭಟಿಸಿದ ಕರ್ನಾಟಕ ಸೇನಾ ಪಡೆ
ಚಾಮರಾಜನಗರ, ಅಕ್ಟೋಬರ್, 21: ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಚಾಮರಾಜನಗರದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಐಸ್ ತಟ್ಟೆ ತಲೆಹೊತ್ತು ವಿನೂತನ ಪ್ರತಿಭಟನೆ ನಡೆಸಲಾಯಿತು
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿತರು ಐಸ್ ತಟ್ಟೆ ತಲೆಮೇಲೆ ಹೊತ್ತು ಅಲ್ಲಿಂದ ಮೆರವಣಿಗೆ ಹೊರಟು, ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ, ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ, ಕರ್ನಾಟಕ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡು ಒತ್ತಡಕ್ಕೆ ಮಣಿದು, ಕಾವೇರಿ ನ್ಯಾಯಾಧೀಕರಣ ತಮಿಳುನಾಡಿನ ಏಜೆಂಟ್ ರೀತಿ ವರ್ತನೆ ಮಾಡುತ್ತಿದೆ. ನಮ್ಮ ನೀರಿಗೆ ಅತ್ಯಂತ ತೊಂದರೆ ಉಂಟು ಮಾಡುತ್ತಿದೆ. ಇದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸತತವಾಗಿ ಕಳೆದ 38 ದಿನಗಳಿಂದ ವಿನೂತನ ಪ್ರತಿಭಟನೆ ನಡೆಸಿಕೊಂಡು ಬಂದಿದ್ದು, ಇಂದು ಕೂಡ ತಲೆಮೇಲೆ ಐಸ್ ತಟ್ಟೆ ಹೊತ್ತು ಸರ್ಕಾರಗಳು ಕರ್ನಾಟಕದ ಜನತೆಯ ತಲೆಮೇಲೆ ಐಸ್ ಹಾಕಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ ಎಂದರು.
ಕಾವೇರಿ ಜಲಾಶಯಗಳ ಕೊಳ್ಳದಲ್ಲಿ ನೀರು ಬರಿದಾಗುತ್ತಿದ್ದರೂ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಮೌನವಾಗಿದೆ. ತಮಿಳುನಾಡು ಸರ್ಕಾರ ಪದೇಪದೇ ಕಾವೇರಿ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದು ತನ್ನು ತೀಟೆಯನ್ನು ತೀರಿಸಿಕೊಳ್ಳುತ್ತಿದೆ. ಇನ್ನು ಕರ್ನಾಟಕ ಸರ್ಕಾರ ತಮಿಳುನಾಡಿಗೆ ಬಿಟ್ಟಿರುವ ನೀರನ್ನುನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಚಾ.ವೆಂ.ರಾಜ್‌ಗೋಪಾಲ್, ನಿಜದ್ವನಿಗೋವಿಂದರಾಜು, ನಂಜುಂಡಶೆಟ್ಟಿ, ಗು.ಪುರುಷೋತ್ತಮ್, ಚಾ.ಹ.ರಾಮು, ತಾಂಡವಮೂರ್ತಿ, ರಾಜಪ್ಪ, ಲಿಂಗರಾಜು, ವೀರಭದ್ರ, ಸೋಮವಾರಪೇಟೆ ಮಂಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ತಪ್ಪು ಮಾಹಿತಿ ಕೊಟ್ಟ ಎಂಜಿನಿಯರ್‌ಗೆ ಸಚಿವ ತರಾಟೆ
ರೈತರ ಅಂಕಿ-ಅಂಶದ ಪೋರ್ಟಲ್ ಆದ ಪ್ರೂಟ್ಸ್ ಅಪ್‌ನಲ್ಲಿ ಎಷ್ಟು ಮಂದಿ ರೈತರು ನೋಂದಣಿ ಆಗಿದ್ದಾರೆ ಎಂದು ಕೃಷಿ ಅಧಿಕಾರಿಗೆ ಪ್ರಶ್ನೆ ಅರ್ಥ ಮಾಡಿಸುವಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೈರಣಾದರು.
ಚಾಮರಾಜನಗರದ ಜಿಲ್ಲಾಡಳಿತ ಭವನದ ನೂತನ ಕೆಡಿಪಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಬರ ಪರಿಹಾರದ ಹಣವನ್ನು ಈ ಬಾರಿ ಪರಿಹಾರ ಸಾಫ್ಟ್‌ವೇರ್ ಮೂಲಕ ಕೊಡಲಾಗುತ್ತದೆ. ಪ್ರೂಟ್ಸ್‌ನಲ್ಲಿ ನೋಂದಣಿ ಆದ ರೈತರಿಗೆ ಮಾತ್ರ ಪರಿಹಾರ ಮೊತ್ತ ಸಿಗಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಎಷ್ಟು ಮಂದಿ ರೈತರು ನೋಂದಣಿ ಆಗಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಕೇಳಿದರು.
1.80 ಲಕ್ಷ ಮಂದಿ ನೋಂದಣಿ ಆಗಿದ್ದು, 36 ಸಾವಿರ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದರು. ಕಳೆದ ಬಾರಿ 2.5 ಲಕ್ಷದಷ್ಟು ರೈತರ ಮಾಹಿತಿ ಇದೆ ಈಗ 1.80 ಲಕ್ಷ ಅಂಥಾ ಹೇಳ್ತಿದಿರಾ? 36 ಸಾವಿರ ಬಾಕಿ ಇದೆ ಎಂದು ಹೇಳ್ತಿದಿರಾ, ಇನ್ನೆರಡು ತಿಂಗಳಲ್ಲಿ ಎಲ್ಲವೂ ಆಗಬೇಕು. ನಾವು ಪರಿಹಾರ ಕೊಡಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ಎಷ್ಟು ಮಂದಿ ರೈತರು 5 ಎಕರೆಗಿಂತ ಕಡಿಮೆ ಹೊಂದಿದ್ದಾರೆ ಎಂಬ ಸಾಮಾನ್ಯ ಪ್ರಶ್ನೆ ಹಾಗೂ ಪ್ರೂಟ್ಸ್ ಅಂಕಿ-ಅಂಶದ ಬಗ್ಗೆ ಸಚಿವರು ಮೂರು ಬಾರಿ, ಕಂದಾಯ ಇಲಾಖೆ ಅಧಿಕಾರಿ, ಡಿಸಿ ಎರಡು ಬಾರಿ ಪ್ರಶ್ನೆ ಕೇಳಿದರೂ ಅರ್ಥವಾಗಲಿಲ್ಲ, ಕೊನೆಗೆ ಸಚಿವರು ಉತ್ತರ ಪಡೆಯುವ ತನಕ ಹೈರಣಾದರು.
ಪರಿಹಾರ ಕೊಟ್ಟಿಲ್ಲ ಎಂದು ರೈತರು ತಿರುಗಿಬಿದ್ದರೇ ನಮಗೆ ಸಮಸ್ಯೆ ಆಗಲಿದೆ. ಅಧಿಕಾರಿಗಳಿಗೆ ಏನು ತೊಂದರೆಯಾಗಲ್ಲ, ಕೂಡಲೇ ಅಭಿಯಾನದ ರೀತಿ ರೈತರನ್ನು ನೋಂದಣಿ ಮಾಡಿಸಿ. ನಾನು ಕೇಳಿದ ಪ್ರಶ್ನೆ ಸಾಮಾನ್ಯನಿಗೆ ಅರ್ಥವಾಗಲಿದೆ. ನೀವು ಇಲಾಖೆಯಲ್ಲಿರುವವರಿಗೆ ಅರ್ಥವಾಗುವುದಿಲ್ಲವಾ ಎಂದು ಕಿಡಿಕಾರಿದರು.
ವರ್ಷವಾದರೂ ಕಾಮಗಾರಿ ಪೆಂಡಿಂಗ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಂಗನವಾಡಿ ದುರಸ್ತಿಗೆಂದು ಕೊಟ್ಟ ಹಣ ಇನ್ನೂ ಖರ್ಚಾಗದೇ ಹಾಗೆ ಉಳಿದಿದ್ದನ್ನು ಗಮನಿಸಿದ ಸಚಿವರು ಪಿಆರ್‌ಡಿಇ ಎಂಜಿನಿಯರ್‌ಗೆ ತರಾಟೆ ತೆಗೆದುಕೊಂಡರು. ಬಾಯಿ ಇದೆ ಎಂದು ಮಂತ್ರಿ ಹತ್ರ ಏನು ಬೇಕಾದರೂ ಮಾತನಾಡಬೇಡಿ. ರೈಲನ್ನು ಭೂಮಿ ಮೇಲೆ ಬಿಡಿ, ಮಾತಿನಲ್ಲಿ ಅಲ್ಲ. ಎಷ್ಟು ಬೇಜವಾಬ್ದಾರಿ, ಅಶಿಸ್ತು ನಿಮಗೆ ಎಂದು ಕ್ಲಾಸ್ ತೆಗೆದುಕೊಂಡರು.
ಇಷ್ಟು ವರ್ಷವಾದರೂ ಕೆಲಸ ಯಾಕೆ ಆಗಿಲ್ಲ ಎಂದು ಕೇಂದ್ರ ಸರ್ಕಾರ ಕೇಳಲಿದೆ, ನಿಮ್ಮ ಇಲಾಖೆಯಿಂದ ನಾನು ಮುಜುಗರ ಪಡಲಾರೆ. ಈಗಾಗಲೇ ನಿಮ್ಮ ಇಲಾಖೆಯ ಆಯುಕ್ತರ ಜೊತೆ ಸಭೆ ನಡೆಸಿ ಹೇಳಿದರೂ ನೀವು ಕಾಮಗಾರಿ ಆರಂಭಿಸಿಲ್ಲ ಎಂದರೆ ಏನರ್ಥ.?, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿಸಿ ಬಿಲ್ ಕೊಟ್ಟರೇ ಹಣ ಕೊಡಿ. ಇಲ್ಲದಿದ್ದರೇ ಹಣ ವಾಪಸ್ ತೆಗೆದುಕೊಳ್ಳಿ, ಪೆಂಡಿಂಗ್ ಇಡಬೇಡಿ ಎಂದು ಡಿಸಿಗೆ ಸೂಚಿಸಿದರು.
ಈ ವೇಳೆ ಸಭೆಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು.
ತಾಲೂಕು ಕಚೇರಿ, ನಾಡ ಕಚೇರಿಗಳಿಗೆ ಭೇಟಿ
ಸಭೆಗೂ ಮುನ್ನ ಕಂದಾಯ ಸಚಿವರು ಮಾಂಬಳ್ಳಿ ನಾಡಕಚೇರಿ, ಯಳಂದೂರು ತಾಲೂಕು ಕಚೇರಿ, ಸಂತೇಮರಹಳ್ಳಿ ತಾಲೂಕು ಕಚೇರಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ತ್ವರಿತವಾಗಿ ಕೆಲಸ ಮಾಡಬೇಕು, ಯಾವುದೇ ಕಾರಣಕ್ಕೂ ಜನರನ್ನು ಅಲೆಸಬೇಡಿ ಎಂದು ಸೂಚಿಸಿದರು.
ಕೇಂದ್ರ ಸಚಿವರು ಭೇಟಿಗೆ ಅವಕಾಶ ಕೊಡುತ್ತಿಲ್ಲ
ಇದೇ ವೇಳೆ ಮಾಧ್ಯಮವರೊಟ್ಟಿಗೆ ಸಚಿವರು ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಒಟ್ಟು 216 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ.
ರಾಜ್ಯದ ವಸ್ತುಸ್ಥಿತಿಯನ್ನ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂದು ಆರೋಪಿಸಿದರು.
ಕೇಂದ್ರ ಗೃಹ ಸಚಿವರು, ಕೃಷಿ ಸಚಿವರ ಭೇಟಿಗೆ ದಿನಾಂಕ ಕೊಡುತ್ತಿಲ್ಲ. ಸೆ. 23ರಿಂದಲೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನಿಸುತ್ತಿದ್ದೇವೆ. ನಮ್ಮ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ನಿತ್ಯ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ನಾನು ಇನ್ನೊಂದು ವಾರ ಕಾಯುತ್ತೇನೆ, ಬಳಿಕ ದೆಹಲಿಗೆ ಹೋಗಿ ಸರ್ಕಾರದ ಸೆಕ್ರೆಟರಿ ಅವರನ್ನೇ ಖುದ್ದಾಗಿ ಭೇಟಿ ಮಾಡಿ ವಿಚಾರಿಸುತ್ತೇನೆ ಎಂದು ಹೇಳಿದರು.
ನಾವೇನು ಹೆಚ್ಚುವರಿ ಪರಿಹಾರ ಕೇಳುತ್ತಿಲ್ಲ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಕೊಡಬೇಕಾಗಿರೋದನ್ನು ಕೊಡಬೇಕು. ಬರಗಾಲ ಸಂದರ್ಭದಲ್ಲಿ ಅಗತ್ಯ ನೆರವು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಬೇರೆ ರಾಜ್ಯಗಳಿಗೆ ಮಾಡಿದಂತೆ ನಮಗೂ ಸಹಾಯ ಮಾಡಬೇಕು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications