ಹಾಸನ ಸಮಾವೇಶ ಮಾಡುವ ಬಗ್ಗೆ ಕಾರಣ ಬಿಚ್ಚಿಟ್ಟ ಸಚಿವ
ಚಾಮರಾಜನಗರ, ಬೆಂಗಳೂರು, 30: ಕಾಂಗ್ರೆಸ್ ಸರ್ಕಾರವು ಹಾಸನದಲ್ಲಿ ಸಮಾವೇಶ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಸಚಿವ ಕೆ.ವೆಂಕಟೇಶ್ ಅವರು, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು, ಕಾರ್ಯಕರ್ತರನ್ನು ಹುರಿದುಂಬಿಸಲು ಹಾಸನದಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು. ಚಾಮರಾಜನಗರದ ಪುರಾಣಿ ಪೋಡಿನಲ್ಲಿ ವಿದ್ಯುತ್ ಸಂಪರ್ಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಶೋಷಿತ ಸಮುದಾಯದಿಂದ ಆಯೋಜನೆ ಈ ಸಮಾವೇಶವನ್ನು ಮಾಡಲಾಗುತ್ತಿದೆ. ಇದರಲ್ಲಿ ಕೇಂದ್ರದ ನಾಯಕರು ಕೂಡ ಭಾಗಿಯಾಗಲಿದ್ದಾರೆ. ಸಮಾವೇಶವು ಶಕ್ತಿ ಪ್ರದರ್ಶನವಲ್ಲ, ಸಂಘಟನಾತ್ಮಕ ದೃಷ್ಟಿಯಿಂದ ಮಾಡಲಾಗುತ್ತಿದೆ ಎಂದರು.

2 ಲಕ್ಷಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಚಾಮರಾಜನಗರ ಜಿಲ್ಲೆಯಿಂದಲೂ 30,000ಕ್ಕೂ ಅಧಿಕ ಮಂದಿ ಸಮಾವೇಶಕ್ಕೆ ಬರಲಿದ್ದಾರೆ. ಮಂಡ್ಯ ಇಲ್ಲವೇ ಹಾಸನದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಇದೀಗ ಹಾಸನದಲ್ಲಿ ಸಮಾವೇಶ ನಡೆಸಲು ತೀರ್ಮಾನವಾಗಿದ್ದು, ಕೇಂದ್ರದ ಕಾಂಗ್ರೆಸ್ ನಾಯಕರು ಬರುತ್ತಾರೆ ಎಂದರು.
ಎಐಸಿಸಿಗೆ ಪತ್ರ ಬರೆದ ವಿಚಾರಕ್ಕೆ ಸಚಿವ ವೆಂಕಟೇಶ್ ಪ್ರತಿಕ್ರಿಯಿಸಿ, ಯಾರೋ ಬರೆದಿರಬುದು, ಆದರೆ ನಾವು ಸಮಾವೇಶ ಮಾಡುತ್ತಿರುವುದು ಪಕ್ಷ ಮತ್ತು ಸಂಘಟನೆಗಳು ಎರಡೂ ಸೇರಿ. ಸಮಾವೇಶವನ್ನು ಯಾವುದೇ ದುರುದ್ದೇಶದಿಂದ ಮಾಡುತ್ತಿಲ್ಲ ಎಂದರು.
ಕಳಪೆ ಆಹಾರ ಪದಾರ್ಥಗಳ ಪೂರೈಕೆ: ಈಗಾಗಲೇ ಜಿಲ್ಲೆಯ ಹಲವೆಡೆ ವಿದ್ಯಾರ್ಥಿನಿಲಯಗಳಲ್ಲಿ ಕಳಪೆ ಗುಣಪಟ್ಟದ ಆಹಾರ ನೀಡಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆಗಳು ನಡೆದಿವೆ. ಇದೀಗ ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ಪೂರೈಸುವ ಆಹಾರ ಪದಾರ್ಥಗಳು ಕಳಪೆಯಾಗಿದ್ದು, ಆಹಾರ ಪದಾರ್ಥಗಳ ಸ್ಯಾಂಪಲ್ ತಂದ ಶಾಸಕರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ಚಾಮರಾಜನಗರ ಕೆಡಿಪಿ ಸಭೆಯಲ್ಲಿ ನಡೆಯಿತು.
ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದಿದ್ದು, ಈ ವೇಳೆ ಶಾಲೆಗಳಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆಹಾರ ಧಾನ್ಯಗಳ ಸ್ಯಾಂಪಲ್‌ಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು. ಸಚಿವರು ಹುಳು ಬಂದಿದ್ದ ಬೇಳೆ ಕಂಡು ಆಹಾರ ಇಲಾಖೆ ಡಿಡಿ ಯೋಗಾನಂದ ಸೇರಿ ಅಕ್ಷರ ದಾಸೋಹದ ಅಧಿಕಾರಿಗಳಿಗೆ ಬೆವರಿಳಿಸಿದರು.
ಇನ್ನು, ಅಕ್ಷರ ದಾಸೋಹ ಇಲಾಖೆ ತಂದಿದ್ದ ಬೇಳೆ ಹಾಗೂ ಶಾಸಕರು ತಂದಿದ್ದ ಬೇಳೆ ಎರಡೂ ಕೂಡ ಸ್ವಚ್ಛವಾಗಿರದೇ ಕಳಪೆಯಿಂದ ಕೂಡಿತ್ತು. ಕಳಪೆ ಆಹಾರ ಪೂರೈಕೆ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡಿದ್ದೀರಾ ಎಂದು ಸಚಿವರು ಕೇಳಿದ್ದಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಡಿ ಉತ್ತರಿಸಿದರು.
ಇನ್ನು, ಡಿಡಿ ಅವರ ಉತ್ತರದಿಂದ ಸಮಾಧಾನವಾಗದ ಸಚಿವರು, ಶಾಸಕರು ತೀವ್ರ ತರಾಟೆಗೆ ತೆಗೆದುಕೊಂದು ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೊಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಸೂಚನೆ ನೀಡಿದರು.












Click it and Unblock the Notifications