ನಟ ದರ್ಶನ್‌ಗೆ ಮಧ್ಯಂತರ ಜಾಮೀನು: ಗಡಿಜಿಲ್ಲೆಯಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಹೇಗಿತ್ತು.?
Actor Darshan Bail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಇಂದು (ಅಕ್ಟೋಬರ್ 30) ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಅಭಿಮಾನಿಗಳಿಂದ ಸಂಭ್ರಾಮಾಚರಣೆ ಜೋರಾಗಿ ನಡೆಯುತ್ತಿದೆ. ಹಾಗೆಯೇ ಗಡಿಜಿಲ್ಲೆ ಚಾಮರಾಜನಗರದಲ್ಲೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ದೊರೆತ ಹಿನ್ನೆಲೆ ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘದ ವತಿಯಿಂದ ಚಾಮರಾಜನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಸಂಭ್ರಮಿಸಿದರು. ಸಂಘದ ಜಿಲ್ಲಾಧ್ಯಕ್ಷ ವಿನಯ್ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ದರ್ಶನ್ ಅಭಿಮಾನಿಗಳು ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ದರ್ಶನ್ ಪರ ಜೈಕಾರ ಕೂಗಿ ಪಟಾಕಿ ಸಿಡಿಸಿ, ಸಿಹಿ ಸಂಭ್ರಮಿಸಿದರು.

ಈ ವೇಳೆ ಸಂಘದ ಬಿ.ಪಿ.ಪ್ರಕಾಶ್ ಮಾತನಾಡಿ, ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ದೊರೆತು ಬಿಡುಗಡೆ ಆಗುತ್ತಿರುವುದು ನಮಗೆಲ್ಲ ಖುಷಿ ತಂದಿದೆ ಎಂದು ಹೇಳುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ನಟ ದರ್ಶನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ ಎಂದು ಮೃತ ರೇಣುಕಾಸ್ವಾಮಿ ತಂದೆ ಶಿವನಗೌಡ ಹೇಳಿದ್ದಾರೆ.
ಚಿತ್ರದುರ್ಗ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹೈ ಕೋರ್ಟ್ ಆದೇಶದಂತೆ ದರ್ಶನ್‌ಗೆ ವೈದ್ಯಕೀಯ ಚಿಕಿತ್ಸೆ ಮೇರೆಗೆ ಬೇಲ್ ನೀಡಿದೆ. ಈ ವಿಚಾರ ಕಾನೂನು, ನ್ಯಾಯಾಂಗದ ವಿಚಾರವಾಗಿದೆ. ನಾವು ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸರ್ಕಾರ, ನ್ಯಾಯಾಂಗದ ಬಗ್ಗೆ ನಮಗೆ ನಂಬಿಕೆಯಿದೆ. ಈ ಮೂಲಕ ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲಿ ಎಮಬುದು ನಮ್ಮ ಉದ್ದೇಶ ಎಂದರು.
ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಲಿ, ಅದು ದರ್ಶನ್ ಅಭಿಮಾನಿಗಳಿಗೆ ಬಿಟ್ಟಿದ್ದು. ನಮಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನಾವು ದಾವಣಗೆರೆಗೆ ತೆರಳಿ ದೇವರ ದರ್ಶನ ತಗೊಂಡು ಬಂದಿದ್ದೇವೆ. ಮೊಮ್ಮಗನ ಮುಖ ನೋಡೀಕೆ ಹೋಗಿದ್ವಿ, ಮಗು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಸಧ್ಯ ತಾಯಿ-ಮಗುವಿನ ಆರೋಗ್ಯ ಸುಧಾರಿಸಿದೆ ಎಂದು ತಿಳಿಸಿದರು.
ವೈದ್ಯರು ಕೊಟ್ಟ ಸಲಹೆಯಂತೆ ಅವರ ತಂದೆ-ತಾಯಿ ಜೋಪಾನ ಮಾಡ್ತಿದ್ದಾರೆ. ಮಗುವಿಗೆ ಲಿಂಗಧಾರಣೆ, ನಾಮಕರಣದಂತಹ ಕಾರ್ಯಕ್ರಮ ಆಗಬೇಕಿದೆ. ನಾಮಕರಣ ಬಗ್ಗೆ ನಾವಿನ್ನೂ ನಿರ್ಧಾರ ಮಾಡಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದು ನಮ್ಮ ಗುರಿ ಎಂದು ಮೃತ ರೇಣುಕಾಸ್ವಾಮಿ ತಂದೆ ಹೇಳಿದರು.












Click it and Unblock the Notifications