ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆಗೆ ನಡೆಸುತ್ತಿದ್ದ 7 ಜನರ ಬಂಧನ
ಚಾಮರಾಜನಗರ, ಜನವರಿ 29: ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸ್ಪೋಟಕಗಳನ್ನು ಬಳಸಿ ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಾ ಬರಲಾಗುತ್ತಿದ್ದು, ಕುಂದಕೆರೆ ಗ್ರಾಮದಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ಸ್ಪೋಟಕಗಳನ್ನು ಪತ್ತೆಹಚ್ಚಿರುವ ಪೊಲೀಸರು ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಮೀನಿನ ಮಾಲೀಕ ಮಲ್ಲಪ್ಪ. ಅಂಕಪ್ಪ, ಮುರುಗೇಶ್, ಸ್ವಾಮಿ, ರವಿ, ರಾಜು, ವೆಂಕಟೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಂದಕೆರೆ ಗ್ರಾಮದ ಪಟ್ಟಾ ಜಮೀನಿನಲ್ಲಿ ಪರವಾನಗಿ ಪಡೆಯದೆ ಸ್ಪೋಟಕಗಳನ್ನು ಬಳಕೆ ಮಾಡಿಕೊಂಡಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ತೆರಕಣಾಂಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿ ಸ್ಫೋಟಕ ವಸ್ತುಗಳಾದ ಜಿಲೆಟಿನ್ ಕಡ್ಡಿಗಳು. ಡಿಟೋನೇಟರ್, ತೋಟ, ಕೇಪು, ಮೆಗ್ಗರ್, ಸುತ್ತಿಗೆ, ಕಂಪ್ರೆಸರ್ ವಾಹನ ದೊರೆತಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡು ಸಂಬಂಧಿಸಿದ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರೆ, ಇವರ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ನಾಯಿಕೊಡೆಗಳಂತೆ ಗಣಿಗಾರಿಕೆ ತಲೆ ಎತ್ತಿದ್ದು, ಇವುಗಳ ಪೈಕಿ ಕೆಲವು ಅಕ್ರಮವಾಗಿ ನಡೆಯುತ್ತಿದ್ದು, ರೈತರ ಜಮೀನಿನಲ್ಲೇ ನಡೆಯುತ್ತಿರುವುದರಿಂದ ಸುತ್ತಮುತ್ತಲ ಜಮೀನಿನ ರೈತರಿಗೆ ಕೃಷಿ ಮಾಡಲು ತೊಂದರೆಯಾಗುತ್ತಿದೆ. ಆದರೆ ಪ್ರಭಾವಿಗಳ ಕೈವಾಡವಿರುವ ಕಾರಣದಿಂದಾಗಿ ಇವುಗಳನ್ನು ಮುಚ್ಚಿಸಲು ಸಾಧ್ಯವಾಗುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ದಾಳಿ ನಡೆಯುತ್ತದೆಯಾದರೂ ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ಮಾತ್ರ ಕನಸಿನ ಮಾತಾಗಿ ಉಳಿದಿದೆ.












Click it and Unblock the Notifications