ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಬಗ್ಗೆ ಚಾಮರಾಜನಗರದಲ್ಲಿ ಐಜಿಪಿ ಟಿ.ಬೋರಲಿಂಗಯ್ಯ ಹೇಳಿದ್ದಿಷ್ಟು
ಚಾಮರಾಜನಗರ, ಜುಲೈ, 13: ಇತ್ತೀಚೆಗಷ್ಟೇ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯಾಗಿತ್ತು. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದೆ. ಹಾಗೆಯೇ ಇಂದು ಈ ಬಗ್ಗೆ ಚಾಮರಾಜನಗರದಲ್ಲಿ ಐಜಿಪಿ ಟಿ.ಬೋರಲಿಂಗಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ದಕ್ಷಿಣ ವಲಯ ಐಜಿಪಿ ಟಿ.ಬೋರಲಿಂಗಯ್ಯ ಅವರಿಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ಕೊಟ್ಟು ಪೊಲೀಸರ ಜೊತೆ ಸಭೆ ನಡೆಸಿದರು. ಬಳಿಕ ಟಿ.ನರಸೀಪುರ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಕೊಲೆ ಪ್ರಕರಣದ ಸಂಬಂಧ ಮಾತನಾಡಿದ ಅವರು, ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ಈಗಾಗಲೇ ಮಾತಾಡಿದಾರೆ. ಘಟನೆ ತಡೆಯೋ ವಿಚಾರವಾಗಿ ಪೊಲೀಸರಿಂದ ಸಣ್ಣಪುಟ್ಟ ತಪ್ಪಾಗಿದೆ. ಅವಘಡ ತಡೆಯುವಲ್ಲಿ ವಿಫಲರಾಗಿದ್ದೇವೆ ಎಂದರು.

ಘಟನೆ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವನ್ನು ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ ಎಂದರು. ಹಾಗೆಯೇ ಪುನೀತ್ ಫೋಟೋ ವಿಚಾರ, ಬೈಕ್ ಬಿಡಲಿಲ್ಲ ಎಂಬ ವಿಚಾರಗಳ ಬಗ್ಗೆ ಮಾಹಿತಿ ಬರುತ್ತಾ ಇದೆ. ಹಳೆ ವೈಷಮ್ಯವೂ ಇರಬಹುದು. ತನಿಖೆ ಸಂಪೂರ್ಣ ಆದ ಬಳಿಕ ಎಲ್ಲ ವಿವರ ತಿಳಿಯಲಿದೆ ಎಂದು ಹೇಳಿದರು.
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳ ಸೇವನೆಗಿಂತ ಮಾರಾಟ ಹಾಗೂ ಸಾಗಾಟ ಹೆಚ್ಚಿರುವ ಮಾಹಿತಿ ಇದೆ. ಇದರ ಬಗ್ಗೆ ಅಧಿಕಾರಿಗಳಿಗೆ ಕೆಲವು ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ಚಾಮರಾಜನಗರದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡಗಳನ್ನು ಶೀಘ್ರವೇ ಉದ್ಘಾಟನೆ ಮಾಡಲಾಗುವುದು. ಜೊತೆಗೆ, ಡಿಆರ್ ಸಿಬ್ಬಂದಿಗೆ ಬಡ್ತಿ ನೀಡುವ ಬಗ್ಗೆ ಚರ್ಚೆ ನಡೆಸುತ್ತೇನೆ. ಅಪಘಾತ ತಡೆಯುವಲ್ಲಿ ಕ್ರಮ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಬೀಟಿಂಗ್ ವ್ಯವಸ್ಥೆಗಳ ಬಗ್ಗೆ ಸೂಚನೆ ಕೊಟ್ಟಿರುವುದಾಗಿ ಹೇಳಿದರು.
ಸಿ.ಟಿ ರವಿ ಹೇಳಿದ್ದೇನು?
ಹಾಗೆಯೇ ಹಿಂದೂ ಕಾರ್ಯಕರ್ತ ಹಾಗೂ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಇದೊಂದು ಪೂರ್ವಯೋಜಿತ ಕೃತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಇತ್ತೀಚೆಗಷ್ಟೇ ಆರೋಪಿಸಿದ್ದರು.
ತಿ.ನರಸೀಪುರಕ್ಕೆ ಭೇಟಿ ನೀಡಿದ ಸಿ.ಟಿ ರವಿ ಕೊಲೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕುಟುಂಬ ಹಾಗೂ ಸ್ಥಳೀಯರೊಂದಿಗೆ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳಿಗೆ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ಇರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಆರೋಪಿಗಳು ಚುನಾವಣೆ ವೇಳೆ ಕಾಂಗ್ರೆಸ್ ಪರ ಕೆಲಸ ಮಾಡಿದವರು ಎನ್ನುವುದು ಕೂಡ ಸ್ಪಷ್ಟ. ಹೀಗಾಗಿ ಪ್ರಕರಣ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.
ವೇಣುಗೋಪಾಲ್ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಆಯುಧಗಳಿಂದ 30ಕ್ಕೂ ಹೆಚ್ಚು ಕಡೆ ಚುಚ್ಚಿದ್ದಾರೆ. ಆತ ಹನುಮ ಜಯಂತಿ ನೇತೃತ್ವ ವಹಿಸಿದ್ದ ಎಂಬ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಷಡ್ಯಂತ್ರ ಕಂಡು ಬರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 16-17 ಜನರ ಮೇಲೆ ಹಲ್ಲೆ ಹಾಗೂ ಹತ್ಯೆ ಘಟನೆಗಳು ನಡೆದಿದೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಈ ರಾಜ್ಯವನ್ನು ಅರಾಜಕತೆಗೆ ಕೊಂಡೊಯ್ಯುತ್ತಿದೆ. ಹಿಂದೂ ಚಟುವಟಿಕೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹಿಂದೂ ಕಾರ್ಯಕರ್ತರನ್ನು ಮುಗಿಸುವ, ಭಯ ಹುಟ್ಟಿಸುವ ಮಾನಸಿಕತೆ ಸೃಷ್ಟಿಯಾಗಿದೆ ಎಂದು ಸಿ.ಟಿ ಗಂಭೀರ ಆರೋಪ ಮಾಡಿದರು. ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾದ ಹ್ಯಾರಿಸ್‌ಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹ್ಯಾರಿಸ್ ಪಾತ್ರ ಇಲ್ಲವೆಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಹ್ಯಾರಿಸ್ ಸುಮ್ಮನೆ ಇದ್ದ ಎಂಬ ಸುದ್ದಿ ಪ್ಲಾಂಟ್ ಮಾಡಲಾಗುತ್ತಿದೆ. ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಆತನ ಪಾತ್ರ ಬಹಳ ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತ್ಯಕ್ಷ ಸಾಕ್ಷಿನಾ? ನೀವು ಹೇಗೆ ಕ್ಲೀನ್ ಚಿಟ್ ಕೊಡುತ್ತೀರಿ ಎಂದು ಪ್ರಶ್ನಿಸಿದ್ದರು.












Click it and Unblock the Notifications