Vatal Nagaraj: 224 ಕ್ಷೇತ್ರಗಳಲ್ಲೂ ನಾನೇ ಸೂಪರ್ ಸ್ಟಾರ್ ಅಭ್ಯರ್ಥಿ: ವಾಟಾಳ್ ನಾಗರಾಜ್
ಚಾಮರಾಜನಗರ, ಮೇ, 06: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅದೇ ರೀತಿ ಬಹಿರಂಗ ಪ್ರಚಾರ ಅಂತ್ಯಕ್ಕೆ ಎರಡು ದಿನ ಬಾಕಿ ಇದ್ದು, ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಪರ ಇಂದು ಪುತ್ರಿ ರೋಡ್ ಶೋ ನಡೆಸಿ ಮತಬೇಟೆ ನಡೆಸಿದರು.
ಚಾಮರಾಜನಗರದ ಸಂತೇಮರಹಳ್ಳಿ ವೃತ್ತ, ಡಿವಿ ಏಷನ್ ರಸ್ತೆ, ಜೋಡಿ ರಸ್ತೆ, ರಾಮಸಮುದ್ರ, ಚಿಕ್ಕಂಗಡಿ ಬೀದಿ, ದೊಡ್ಡಂಗಡಿ ಬೀದಿ, ಷರೀಪ್ ವೃತ್ತಗಳಲ್ಲಿ ತಂದೆ ವಾಟಾಳ್ ಜೊತೆಗೂಡಿ ಪುತ್ರಿ ರೋಡ್ ಶೋ ನಡೆಸಿ ಮತ ಹಾಕುವಂತೆ ಜನರಿಗೆ ಮನವಿ ಮಾಡಿದರು.

ನಂತರ ಮಾತನಾಡಿದ ವಾಟಾಳ್ ನಾಗರಾಜ್ ಪುತ್ರಿ ಅನುಪಮಾ, ನನ್ನ ತಂದೆ ಕೇವಲ ರಾಜಕಾರಣಿ ಅಲ್ಲ. ಪ್ರಚಂಡ ಹೋರಾಟಗಾರ, ಉತ್ತಮರನ್ನು ಆಯ್ಕೆ ಮಾಡಬೇಕೆಂದು ಜನರು ಹೇಳುತ್ತಾರೆ. ವಾಟಾಳ್ ನಾಗರಾಜ್ ಅವರಿಗಿಂತ ಉತ್ತಮ ಅಭ್ಯರ್ಥಿ ಸಿಗುವುದಿಲ್ಲ. ಅದಕ್ಕಾಗಿ ಜನರು ಈ ಬಾರಿ ವಾಟಾಳ್ ಅವರನ್ನು ಗೆಲ್ಲಿಸಿಬೇಕೆಂದು ಮನವಿ ಮಾಡಿದರು.
ನೂರಕ್ಕೆ ನೂರರಷ್ಠು ಗೆಲ್ಲುವ ಅರ್ಹತೆಯುಳ್ಳು ಅಭ್ಯರ್ಥಿ ಎಂದರೆ ನಮ್ಮ ತಂದೆ ವಾಟಾಳ್ ನಾಗರಾಜ್. ದಿನಿನಿತ್ಯ ಹೋರಾಟ ಮಾಡುವ ಪ್ರಚಂಡ ಹೋರಾಟಗಾರ, ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಜನರ ಮೇಲಿದ್ದು, ಚಾಮರಾಜನಗರ ಅಭಿವೃದ್ಧಿಗಾಗಿ ಜೀವನವನ್ನೇ ವಾಟಾಳ್ ತ್ಯಾಗ ಮಾಡಿದ್ದಾರೆ. ಹೋರಾಟಗಾರರನ್ನು ಗೆಲ್ಲಿಸುವ ಅವಕಾಶ, ಜವಾಬ್ದಾರಿ ಎರಡೂ ಜನರಿಗೆ ಈ ಬಾರಿ ಸಿಕ್ಕಿದೆ ಎಂದರು.
ನಾನೆ ಸೂಪರ್ ಫೈನ್, ಸೂಪರ್ ಸ್ಟಾರ್
ಇನ್ನು, ವಾಟಾಳ್ ನಾಗರಾಜ್ ಮಾತನಾಡಿ, 224 ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ನಾನೇ ಸೂಪರ್ ಫೈನ್ ಅಭ್ಯರ್ಥಿ ಆಗಿದ್ದೇನೆ. ನನಗಿಂತ ಉತ್ತಮ ಸಂಸದೀಯ ಪಟು ಸಿಗುವುದಿಲ್ಲ. ನಾನೇ ಸೂಪರ್ ಸ್ಟಾರ್ ಅಭ್ಯರ್ಥಿ. ಜನರು ಈ ಬಾರಿ ಗೆಲ್ಲಿಸುವುದು ಶತಸಿದ್ಧ, ಯಾರು ಏನೇ ಹೇಳಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಒಂದು ಕಡೆಯು ನನಗೆ ವಿರೋಧದ ಮಾತಿಲ್ಲ. ಎಲ್ಲಿ ನೋಡಿದರೂ ಜಿಲ್ಲೆ, ಕಾವೇರಿ, ಜೋಡಿ ರಸ್ತೆ ಅಭಿವೃದ್ದಿ ಮಾಡಿದವರು ನೀವೇ ಎಂದು ಹೇಳುತ್ತಿದ್ದಾರೆ. ಹಳ್ಳಿಗಳಲ್ಲಿ ಜನತೆ ನನ್ನನ್ನು ಮೆರವಣಿಗೆ ಮಾಡಿ ಜೈಕಾರ ಹಾಕಿ ಕೂಗುವ ಮೂಲಕ ಚಾಮರಾಜನಗರ ಅಭಿವೃದ್ದಿಗಾಗಿ ವಾಟಾಳ್ ನಾಗರಾಜ್ ಅವರಂತಹ ವ್ಯಕ್ತಿ ಬೇಕು ಎಂದು ಸಂಭ್ರಮಿಸುತ್ತಿದ್ದಾರೆ. ಆದ್ದರಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹನೂರಿನಲ್ಲಿ ಎಚ್.ಡಿ.ಕೆ. ಪ್ರಚಾರ
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಜೆ.ಡಿ.ಎಸ್ ಅಭ್ಯರ್ಥಿಗಳ ಪರ ಹನೂರಿನಲ್ಲಿ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದರು. ಈ ವೇಳೆ ಬೆಂಗಳೂರಿನ ಮೋದಿ ರೋಡ್ ಶೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಅವರು ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡುತ್ತಿದ್ದಾರೆ. ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡುತ್ತಿದ್ದಾರೆ. ಇದರಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ ಎಂದು ಗುಡುಗಿದರು.
ಅಲ್ಲದೆ ನಾಳೆ ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಪ್ರಧಾನಿ ಅವರ ರೋಡ್ ಶೋ ಪರಿಣಾಮ ಬೀರುತ್ತದೆ. ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಾರೆ. ಹಾಗಿದರೆ ರೋಡ್ ಶೋ ಯಾಕೆ ಮಾಡುತ್ತೀರಾ? ಯಾರೋ ಕೆಲವರನ್ನು ತುಂಬಿಕೊಬಂದು ನಿಲ್ಲಿಸಿ ಮೋದಿ ಮೋದಿ ಎಂದು ಕೂಗಿಸಿಕೊಂಡು ಹೋಗುತ್ತಾರೆ. ಇದರಿಂದ ಜನರಿಗೆ ತೊಂದರೆಯೇ ಹೊರತು ಬಿಜೆಪಿಗೆ ಲಾಭ ಇಲ್ಲ ಎಂದರು.
ಇನ್ನು ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಬರುತ್ತಿರುವ ಸಮೀಕ್ಷೆಗಳು ಕೃತಕವಾಗಿವೆ. ರಾಷ್ಟ್ರೀಯ ಪಕ್ಷಗಳು ಹಣ ಕೊಟ್ಟು ಜನರ ಭಾವನೆಗಳನ್ನು ಕದಡುವ ಕೆಲಸವನ್ನು ಮಾಡುತ್ತಿವೆ. ಈ ಸಮೀಕ್ಷೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವು ರಾಷ್ಟ್ರೀಯ ಪಕ್ಷಗಳ ಹಣಕ್ಕೋಸ್ಕರ ಮಾಡಿರುವ ಸಮೀಕ್ಷೆಗಳಾಗಿವೆ. ಇವೆಲ್ಲ ಈ ಬಾರಿ ಉಲ್ಟಾ ಹೊಡೆಯುತ್ತವೆ. ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ಹಾಗೆಯೇ ಸಮೀಕ್ಷೆಗಳಲ್ಲಿ ಜೆಡಿಎಸ್‌ಗೆ ಕಡಿಮೆ ಸ್ಥಾನ ಕೊಟ್ಟಿರುವವರು ಆನಂದಪಡಲಿ.
ಇನ್ನು ಸಿದ್ದರಾಮಯ್ಯನವರಿಗೆ ಯಾವ ಸಿದ್ಧಾಂತವಿದೆ. ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಅನ್ನೇ ಮುಗಿಸಿ ಎನ್ನುತ್ತಾರೆ.ಹೃದಯದಲ್ಲಿರುವುದನ್ನು ಅವರು ಹೇಳುತ್ತಾರೆ. ಆಮೇಲೆ ಇಲ್ಲ.. ಇಲ್ಲ.. ಬಿಜೆಪಿ ಮುಗಿಸಿ ಅಂತಾರೆ. ಇದು ಅವರ ಸಿದ್ಧಾಂತವಾಗಿದೆ. ನಾವು ಅವರಿಂದ ಸಿದ್ಧಾಂತವನ್ನು ಕಲಿಯಬೇಕಾಗಿಲ್ಲ ಎಂದರು.












Click it and Unblock the Notifications