ಚಾಮರಾಜನಗರ ಜಿಲ್ಲೆಯ ಒಂದೂರಲ್ಲಿ ಅಂತ್ಯಸಂಸ್ಕಾರಕ್ಕೆ ಬಾರದ ಜನ; ಮತ್ತೊಂದು ಕಡೆ ಮುಸ್ಲಿಂ ಯುವಕರಿಂದ ಹಿಂದೂ ವೃದ್ಧೆಯ ಅಂತ್ಯಕ್ರಿಯೆ
ಮುಸ್ಲಿಂ ಯುವಕರು ಹಿಂದೂ ವೃದ್ಧನ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮಾನವೀಯತೆ ಮೆರೆದಿದ ಘಟನೆ ನಡೆದಿದ್ದು, ಈ ಯುವಕರ ಮಾನವೀಯತೆಗೆ ಎಲ್ಲೆಡೆ ಅಭಿನಂದನೆಗಳು ವ್ಯಕ್ತವಾಗುತ್ತಿವೆ.
ಚಾಮರಾಜನಗರ, ಫೆಬ್ರವರಿ, 13: ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ಘಟನೆಗಳು ನಡೆದಿವೆ. ಒಂದೂರಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಬರದೇ ಕರಿನೆರಳು ಆವರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಯುವಕರು ಹಿಂದೂ ವೃದ್ಧೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆ ಮೆರೆದ ಮುಸ್ಲಿಮರು
ಚಾಮರಾಜನಗರದ 5ನೇ ವಾರ್ಡ್‌ನಲ್ಲಿ ಮಾನವೀಯ ಕಾರ್ಯವೊಂದು ನಡೆದಿದ್ದು, ವೃದ್ಧೆಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಗಮನ ಸೆಳೆದಿದ್ದಾರೆ.
ನಂಜಮ್ಮ(75) ಎಂಬವರು ಇಂದು ವಯೋಸಹಜದಿಂದ ಮೃತಪಟ್ಟಿದ್ದರು. ಮೃತರು ಅಂತರ್‌ಜಾತಿ ವಿವಾಹ ಆಗಿದ್ದರಿಂದ ಕುಟುಂಬಸ್ಥರಿಂದ ಅವರು ದೂರವಾಗಿ ವಾಸವಿದ್ದರು.
ಕೆಲ ವರ್ಷಗಳ ಹಿಂದೆ ಪತಿಯೂ ತೀರಿಕೊಂಡಿದ್ದರಿಂದ ಮಕ್ಕಳಿಲ್ಲದೇ ಒಂಟಿಯಾಗಿ ವಾಸಿಸುತ್ತಿದ್ದರು. ಇದೀಗ ನಂಜಮ್ಮ ಮೃತಪಟ್ಟ ವಿಚಾರ ತಿಳಿದ ನಗರಸಭಾ ಸದಸ್ಯೆ ತೌಸಿಯಾ ಬಾನು ಅವರ ಪತಿ ಇಸ್ತಾರ್ ಪಾಷಾ, ಉಮರ್, ರುಮಾನ್, ಸಮೀವುಲ್ಲಾ ಎಂಬವರು ಸೇರಿಕೊಂಡು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀತೆ ಮೆರೆದಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಸಾಮಾಜಿಕ ಬಹಿಷ್ಕಾರ
ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಕುಟುಂಬವೊಂದನ್ನು ಬಹಿಷ್ಕರಿಸಿರುವ ಆರೋಪ ಕೇಳಿಬಂದಿದ್ದು, ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಬರದಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ರಂಗಶೆಟ್ಟಿ ಎಂಬವರು (65 ) ಭಾನುವಾರ ಬೆಳಗ್ಗೆ ಮೃತಪಟ್ಟಿದ್ದರು. ಗ್ರಾಮದಿಂದ ರಂಗಶೆಟ್ಟಿ ಅವರ ಕುಟುಂಬವನ್ನು ಬಹಿಷ್ಕರಿಸಿರುವ ಕಾರಣದಿಂದ ಶವಸಂಸ್ಕಾರಕ್ಕೆ ಅವರ ಸಮುದಾಯದ ಜನರು ಬರಲಿಲ್ಲ. ಕೊನೆಗೆ ಮುಸ್ಲಿಂ ಯುವಕರೇ ಆಗಮಿಸಿ ವದ್ಧ ರಂಗಶೆಟ್ಟಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.
ಶವ ಸಂಸ್ಕಾರಕ್ಕೆ ಬಾರದ ಜನ
ತನಗೆ ರಂಗಸ್ವಾಮಿ, ಸಿದ್ದರಾಜು, ಗಂಗಮ್ಮ, ಮಹಾಲಕ್ಷ್ಮೀ ಎಂಬ 4 ಜನ ಮಕ್ಕಳಿದ್ದಾರೆ. ತಮ್ಮನ್ನು 5 ವರ್ಷಗಳಿಂದ ಗ್ರಾಮದಲ್ಲಿ ಬಹಿಷ್ಕರಿಸಿರುವ ಕಾರಣ ನಾವು ತೋಟದ ಮನೆಯಲ್ಲಿ ಇದ್ದೆವು. ಈಗ ನನ್ನ ಪತಿ ಸಾವನ್ನಪ್ಪಿದ್ದು, ಊರಿನಿಂದ ಯಾರೊಬ್ಬರೂ ಅವರ ಶವ ಸಂಸ್ಕಾರಕ್ಕೆ ಬರುತ್ತಿಲ್ಲ ಎಂದು ಮೃತರ ಪತ್ನಿ ಮಹಾದೇವಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ. ನಾಗವಳ್ಳಿ ಗ್ರಾಮದಲ್ಲಿ ಶಾಮಿಯಾನ ಬಾಡಿಗೆಗೆ ಪಡೆಯಲು ಅವಕಾಶ ಮಾಡಿ ಕೊಟ್ಟಿಲ್ಲ, 15ರಿಂದ 20ಜನ ಸಂಬಂಧಿಕರನ್ನು ಬಿಟ್ಟರೆ ಗ್ರಾಮಸ್ಥರು ಬಂದಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ಠಾಣೆಗೆ ದೂರು
ಈ ಸಂಬಂಧ ಮೃತರ ಕುಟುಂಬ ಚಾಮರಾಜನಗರ ಪೂರ್ವ ಠಾಣೆಗೆ ದೂರು ಕೊಟ್ಟಿದ್ದರು. ತಾವು ಯಾವುದೇ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಂತ್ಯಸಂಸ್ಕಾರಕ್ಕೆ ತೆರಳುವುದು ವ್ಯಕ್ತಿ ಸ್ವಯಂ ನಿರ್ಧಾರವಾಗಿರುವುದರಿಂದ ಬಲವಂತದಿಂದ ಹೋಗಿ ಅನ್ನಲು ಆಗುವುದಿಲ್ಲ. ಈ ಸಂಬಂಧ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಚಾಮರಾಜನಗರ ಪೂರ್ವ ಠಾಣೆಯೆ ಪಿಐ ಶ್ರೀಕಾಂತ್ ತಿಳಿಸಿದ್ದಾರೆ.
ಹೀಗೆ ಒಂದೆಡೆ ಅಂತ್ಯಸಂಸ್ಕಾರಕ್ಕೆ ಬಹಿಷ್ಕಾರ ಆರೋಪ ಕೇಳಿಬಂದರೇ ಮತ್ತೊಂದೆಡೆ ಅಂತ್ಯಸಂಸ್ಕಾರಕ್ಕೆ ಅನ್ಯಧರ್ಮದ ಯುವಕರು ಹೆಗಲು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.












Click it and Unblock the Notifications