Get Updates
Get notified of breaking news, exclusive insights, and must-see stories!

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಜಾತ್ರೆ ಸಂಭ್ರಮ: ಇಲ್ಲಿನ ವಿಶೇಷತೆ ತಿಳಿಯಿರಿ

ಚಾಮರಾಜನಗರ: ಮಟಮಟ ಮಧ್ಯಾಹ್ನದಲ್ಲೂ ತಂಗಾಳಿ ಬೀಸಿ ಮೈಮನಕ್ಕೆ ಮುದ ನೀಡುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸುಂದರ, ನಿಸರ್ಗ ರಮಣೀಯ, ನಾಸ್ತಿಕ, ಆಸ್ತಿಕರೆನ್ನದೆ ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೀಗ ಜಾತ್ರಾ ಸಂಭ್ರಮ ಮನೆ ಮಾಡಿದೆ. ಒಂದು ವಾರಗಳ ಕಾಲ ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು ಖುಷಿಪಡುವುದರೊಂದಿಗೆ ಗೋಪಾಸ್ವಾಮಿಯ ಕೃಪೆ ಪಾತ್ರರಾಗಲು ಭಕ್ತರು ಕಾಯುತ್ತಿದ್ದಾರೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ ದೈವಿಕ ಶಕ್ತಿಯಿಂದಲೂ ಹೆಸರುವಾಸಿಯಾದ ತಾಣವಾಗಿದೆ. ಇದೇ ತಾಣ ಇತ್ತೀಚೆಗಿನ ದಿನಗಳಲ್ಲಿ ಕಾಡಾನೆ ದೇಗುಲಕ್ಕೆ ಭೇಟಿ ನೀಡುವುದು ಸೇರಿದಂತೆ ದ್ರೋಣ್ ಬಳಸಿ ದೇಗುಲಗಳ ಫೋಟೋಗಳನ್ನು ತೆಗೆದವರೆಗೆ ಭಾರೀ ಸುದ್ದಿಯಲ್ಲಿತ್ತು. ಅದೆಲ್ಲವೂ ಬದಿಗೆ ಸರಿದು ಈಗ ಜಾತ್ರಾ ಸಂಭ್ರಮದಲ್ಲಿ ಜನ ತೇಲುತ್ತಿದ್ದಾರೆ.

Himavad Gopalaswamy Temple Jatre Starts From April 1st

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಪವಿತ್ರ ಕ್ಷೇತ್ರದೊಂದಿಗೆ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿಗೆ ಪ್ರತಿದಿನವೂ ಜನ ಬರುತ್ತಲೇ ಇರುತ್ತಾರೆ. ಆದರೆ ಜಾತ್ರಾ ಸಮಯದಲ್ಲಿ ಸಹಸ್ರಾರು ಮಂದಿ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಗೋಪಾಲಸ್ವಾಮಿಯ ಬೃಹತ್ ರಥವನ್ನು ಎಳೆದು ಧನ್ಯತಾ ಭಾವದೊಂದಿಗೆ ತಮ್ಮ ಮನೆಗಳತ್ತ ಮುಖ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಏ.4, ಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ

ಈ ಬಾರಿ ಜಾತ್ರಾ ಮಹೋತ್ಸವವು ಏಪ್ರಿಲ್ 1ರಿಂದ ಆರಂಭವಾಗಿ ಏ.7ರವರೆಗೆ ನಡೆಯಲಿದೆ. ಈ ನಡುವೆ ಬಲು ಆಕರ್ಷಕ ಮತ್ತು ವಿಶೇಷವಾಗಿರುವ ಗೋಪಾಲಸ್ವಾಮಿಯ ಬ್ರಹ್ಮರಥೋತ್ಸವವು ಏ.4ರಂದು ನಡೆಯಲಿದೆ. ಜಾತ್ರಾ ಸಮಯದಲ್ಲಿ ಒಂದೊಂದು ದಿನವೂ ಮಹತ್ವದಾಗಿದ್ದು, ಪ್ರತಿದಿನವೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಅದರಂತೆ ಯಾವ ದಿನ ಏನು ವಿಶೇಷ ಕಾರ್ಯಕ್ರಮ ನಡೆಯುತ್ತದೆ ಎನ್ನುವುದನ್ನು ನೋಡುವುದಾದರೆ, ಏ.1ರಂದು ಗೋಪಾಲಸ್ವಾಮಿಗೆ ಫಲ ಪಂಚಾಮೃತಾಭಿಷೇಕ, ಆದಿವಾಸರ, ಅಂಕುರಾರ್ಪಣ ಗರುಡ ಪ್ರತಿಷ್ಠಾ ರಕ್ಷಾಬಂಧನ ಕಾರ್ಯಕ್ರಮದೊಂದಿಗೆ ಜಾತ್ರೆಗೆ ಆರಂಭ ದೊರೆಯಲಿದೆ.

Himavad Gopalaswamy Temple Jatre Starts From April 1st

ಏ.2ರಂದು ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಭೇರಿತಾಡನ ಯಾಗಶಾಲಾ ಪ್ರವೇಶ ನಡೆದರೆ, ಏ.3ರಂದು ಗೋಪಾಲಸ್ವಾಮಿಯ ಉತ್ಸವ, ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ, ರುಕ್ಮಿಣಿ ಸತ್ಯಭಾವ ಸಹಿತ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ ನಡೆಯಲಿದೆ. ಇನ್ನು ಏ.4ರಂದು ಬೆಳಿಗ್ಗೆ ಬ್ರಹ್ಮ ರಥೋತ್ಸವ ನಡೆಯಲಿದ್ದು, ಸಂಜೆ ಶಾಂತ್ಯುತ್ಸವ ಜರುಗಲಿದೆ.

ಏ.7ರಂದು ಏಳು ದಿನದ ಜಾತ್ರೆಗೆ ತೆರೆ

ಏ.5ರಂದು ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ, ಡೋಲೋತ್ಸವ, ಶಯನೋತ್ಸವ, 6ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ ಉತ್ಸವ, ಫಣಿಮಾಲಾ ಪ್ರಬಂಧ ಸೇವೆ, ಪೂರ್ಣಾಹುತಿ ನಡೆಯಲಿದ್ದು, ಜಾತ್ರೆಯ ಕೊನೆಯ ಹಂತವಾಗಿ ಏ.7ರಂದು ಮಹಾಭಿಷೇಕ, ಮಹಾ ಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ, ಧ್ವಜಾವರೋಹಣ, ಉಧ್ವಾಸನ ಪ್ರಬಂಧ ಸೇವೆ, ಸೇತು ಸೇವೆ, ಮೂಕಬಲಿ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

Himavad Gopalaswamy Temple Jatre Starts From April 1st

ಜಾತ್ರೆ ಸಂದರ್ಭ ನಾಲ್ಕನೇ ದಿನ ನಡೆಯಲಿರುವ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಬಲು ಪ್ರಸಿದ್ಧಿ ಪಡೆದಿದ್ದು, ಈ ವೇಳೆ ಗೋಪಾಲಸ್ವಾಮಿಯ ಉತ್ಸವ ಮೂರ್ತಿಯನ್ನು ಬ‍್ರಹತ್ ರಥದಲ್ಲಿ ಪ್ರತಿಷ್ಠಾಪಿಸಿ ಕಾಡಿನಿಂದ ತರಲಾದ ಬೆತ್ತ ಮತ್ತು ಇತರೆ ಬಳ್ಳಿಗಳ ಸಹಾಯದಿಂದ ಎಳೆಯಲಾಗುತ್ತದೆ. ಈ ವೇಳೆ ಹಣ್ಣು ಧವನ ಎಸೆದು ನೆರೆದ ಭಕ್ತರು ಹರಕೆ ತೀರಿಸುತ್ತಾರೆ. ಈ ವೇಳೆ ಗೋಪಾಲಸ್ವಾಮಿಗೆ ಜೈಕಾರ ಮುಗಿಲು ಮುಟ್ಟುತ್ತದೆ.

ಗೋಪಾಲಸ್ವಾಮಿಬೆಟ್ಟಕ್ಕೆ ಹೋಗುವುದು ಹೇಗೆ?

ಇದೆಲ್ಲದರ ನಡುವೆ ಹಿಮವದ್ ಗೋಪಾಸ್ವಾಮಿ ಬೆಟ್ಟದ ಬಗ್ಗೆ ಹೇಳಬೇಕೆಂದರೆ, ಇದು ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿದ್ದು ಸುಮಾರು 1450ಅಡಿ ಎತ್ತರವಿದೆ. ಬೆಟ್ಟಪ್ರದೇಶವು ಅತಿ ಎತ್ತರದ ವಿಶಾಲ ಪ್ರದೇಶವನ್ನು ಹೊಂದಿ ತಂಗಾಳಿಯೊಂದಿಗೆ ಮುಂಜಾನೆ ಹಾಗೂ ಸಂಜೆ ಸದಾ ಹಿಮದಿಂದ ಆವೃತವಾಗುವುದರಿಂದ ಮತ್ತು ಗೋಪಾಲಸ್ವಾಮಿ ನೆಲೆ ನಿಂತಿದ್ದರಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.

ಹಿಮವದ್ ಗೋಪಾಲಸ್ವಾಮಿಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಮೈಸೂರಿನಿಂದ 74 ಕಿ.ಮೀ. ಹಾಗೂ ಗುಂಡ್ಲುಪೇಟೆಯಿಂದ 20ಕಿ.ಮೀ ದೂರದಲ್ಲಿದೆ. ಗುಂಡ್ಲುಪೇಟೆಯಿಂದ ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಗಡೆ ಸಾಗಿದರೆ ಬೃಹದಾಕಾರದಲ್ಲಿ ಹರಡಿ ನಿಂತಿರುವ ಶ್ರೀ ಗೋಪಾಲಸ್ವಾಮಿ ಬೆಟ್ಟ ಕಾಣಿಸುತ್ತದೆ. ಇಲ್ಲಿಗೆ ಖಾಸಗಿ ವಾಹನಗಳಿಗೆ ಅವಕಾಶವಿಲ್ಲ. ಸರ್ಕಾರಿ ಬಸ್ ನಲ್ಲಿಯೇ ತೆರಳುವುದು ಅಗತ್ಯವಾಗಿದೆ.

ಗೋವರ್ಧನಗಿರಿಯೇ ಗೋಪಾಲಸ್ವಾಮಿ ಬೆಟ್ಟ?

ಹಿಮವದ್ ಗೋಪಾಲಸ್ವಾಮಿ ದೇಗುಲದ ಬಗ್ಗೆ ಹೇಳುವುದಾದರೆ ಇದಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ ಎನ್ನಲಾಗಿದೆ. ಇತಿಹಾಸದ ಪ್ರಕಾರ ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದನೆಂದೂ ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ. ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಆಕರ್ಷಕವಾಗಿವೆ.

ದ್ರೌಪದಾಯುಗದ ಗೋವರ್ಧನಗಿರಿಯೇ ಈ ಗೋಪಾಲಸ್ವಾಮಿ ಬೆಟ್ಟವೆಂದು ಜನ ನಂಬುತ್ತಾರೆ. ಇಲ್ಲಿನ ದೇಗುಲದಲ್ಲಿ ರುಕ್ಮಿಣಿ, ಸತ್ಯಭಾಮೆಯರ ಸಹಿತ ಶ್ರೀಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಹೇಳಲಾಗುತ್ತದೆ. ಈ ಬೆಟ್ಟವನ್ನು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳು ಸುತ್ತುವರೆದಿವೆ.

ತೊಟ್ಲು ತೀರ್ಥ ಸ್ನಾನದ ವಿಶೇಷತೆಯೇನು?

ಇಲ್ಲಿ ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿನವರಿಗಿದೆ. ರಾಜ್ಯ-ಹೊರರಾಜ್ಯಗಳ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ತಾಣಕ್ಕೆ ಯಾರೇ ಬಂದರೂ ಅವರದೇ ಭಾಷೆಯಲ್ಲಿ ಇಲ್ಲಿ ಕಾರ್ಯನಿರ್ವಹಿಸುವ ಅರ್ಚಕ ವೃಂದ ಮಾಹಿತಿ ನೀಡುವುದು ವಿಶೇಷವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+