ಮಲೆ ಮಹದೇಶ್ವರ ಬೆಟ್ಟಕ್ಕೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ
ಚಾಮರಾಜನಗರ, ಸೆಪ್ಟೆಂಬರ್ 2: ಮಲೆಮಹದೇಶ್ವರ ಬೆಟ್ಟದ ಮೂಲಕ ತಮಿಳುನಾಡಿಗೆ ತೆರಳುತ್ತಿದ್ದ 6 ಚಕ್ರಕ್ಕಿಂತ ಅಧಿಕ ಚಕ್ರಗಳನ್ನು ಹೊಂದಿರುವ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ದಿಂಬಂ ಘಟ್ಟ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ನೀಷೇಧ ಇರುವುದರಿಂದ ತಮಿಳುನಾಡಿಗೆ ಸರಕು ಸಾಗಿಸುವ ಲಾರಿಗಳೆಲ್ಲಾ ಮಲೆಮಹದೇಶ್ವರ ಬೆಟ್ಟದ ಮೂಲಕ ನೆರೆ ರಾಜ್ಯಕ್ಕೆ ತಲುಪುತ್ತಿದ್ದವು. ಆದರೆ, ಬೆಟ್ಟದ ರಸ್ತೆ ಕಿರಿದು ಹಾಗೂ ಕಡಿದಾದ ಹಿನ್ನೆಲೆಯಲ್ಲಿ ಆಗಾಗ್ಗೆ ಲಾರಿಗಳು ಪಲ್ಟಿಯಾಗಿ ಗಂಟೆಗಟ್ಟಲೇ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
Breaking: ಆಗುಂಬೆ ಘಾಟ್ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ ಮತ್ತೆ ವಿಸ್ತರಣೆ
ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಭಾರಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದು 6 ಚಕ್ರಗಳನ್ನು ಹೊಂದಿರುವ ವಾಹನಗಳ (ಲಾರಿ) ಸಂಚಾರವನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ನಿರ್ಬಂಧಿಸಲಾಗಿದೆ. ಆದರೆ ಸಾರ್ವಜನಿಕರು, ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳು, ಅಗ್ನಿಶಾಮಕ ವಾಹನ, ಅಂಬುಲೆನ್ಸ್ ವಾಹನ, ಸರ್ಕಾರಿ, ಖಾಸಗಿ ಬಸ್‍ಗಳು, ಸರ್ಕಾರಿ ವಾಹನಗಳು 24 ತಾಸು ಕೂಡ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ.
ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಈ ಕಾರಣದಿಂದ ರಾತ್ರಿ ವೇಳೆಯಲ್ಲಿ ಎಲ್ಲಾ ಮಾದರಿಯ ವಾಹನಗಳು ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಮತ್ತು ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ಮೂಲಕ ಸಾಗುವ ಅಂತಾರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಇದರಿಂದ ಮಹದೇಶ್ವರ ಬೆಟ್ಟದ ರಸ್ತೆಗಳು ಸಂಪೂರ್ಣ ಹಾಳಾಗಿದ್ದವು. ಅಲ್ಲದೆ ರಸ್ತೆಯು ಕಡಿದಾದ ತಿರುವಿನಿಂದ ಕೂಡಿದ್ದು ಆಗಾಗ್ಗೆ ಪಲ್ಟಿಯಾಗಿ ಎಡವಟ್ಟು ಸೃಷ್ಟಿಯಾಗುತ್ತಿತ್ತು. ತಿಂಗಳಲ್ಲೇ ಎರಡು ಮೂರು ಬಾರಿ ಅಪಘಾತ ಸಂಭವಿಸಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಸಮಸ್ಯೆಯನ್ನುಂಟು ಮಾಡಿತ್ತು.
ಬರೇಲಿ: ಆಟೋ ಮೇಲೆ ಶಾಲಾ ಮಕ್ಕಳನ್ನು ಕರೆದೊಯ್ದ ಚಾಲಕ- ಪ್ರಕರಣ ದಾಖಲು
ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988ರ ಸೆಕ್ಷನ್ 115, ಕರ್ನಾಟಕ ಮೊಟಾರು ವಾಹನಗಳ ನಿಯಾಮಾವಳಿ-1989ರ ನಿಯಮ 221-ಎ(5)ರ ಹಾಗೂ ಕರ್ನಾಟಕ ಸಂಚಾರ ನಿಯಂತ್ರಣ ಕಾಯ್ದೆ 1960ರ ಸೆಕ್ಷನ್ 3ರ ಪ್ರಕಾರ ಹನೂರು ತಾಲೂಕಿನ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಜೊತೆಗೆ 6 ಚಕ್ರಗಳನ್ನು ಹೊಂದಿರುವ ವಾಹನಗಳ (ಲಾರಿ) ಸಂಚಾರವನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೇರೆಗೆ ಈ ಆದೇಶ ಹೊರಬಿದ್ದಿದ್ದು ಮಾದಪ್ಪನ ಭಕ್ತರಿಗೆ ರಿಲೀಫ್ ಸಿಕ್ಕಿದೆ. ರಸ್ತೆ ಹಾಳಾಗುವುದು ತಪ್ಪಿದಂತಾಗಿದೆ.