Heavy Rain: ಕರ್ನಾಟಕದಿಂದ ಕೇರಳಕ್ಕೆ ವೀಕೆಂಡ್ ಟ್ರಿಪ್ ಪ್ಲಾನ್ ಮಾಡಿಕೊಂಡವರು ಗಮನಿಸಬೇಕಾದ ಪ್ರಮುಖಾಂಶಗಳು
ಚಾಮರಾಜನಗರ, ಜುಲೈ, 19: ದೇಶದ ಹಲವು ರಾಜ್ಯಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆದು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಹಾಗೆಯೇ ಕರ್ನಾಟಕ-ಕೇರಳ ಗಡಿಯಲ್ಲಿ ರಸ್ತೆಗಳು ಜೋರು ಮಳೆಯಿಂದಾಗಿ ಜಲಾವೃತವಾಗಿದ್ದು, ಬತ್ತೇರಿ, ವೈನಾಡಿಗೆ ತೆರಳಲು ಹರಸಾಹಸ ಪಡಬೇಕಿದೆ.
ಬಂಡೀಪುರಕ್ಕೆ ಹೊಂದಿಕೊಂಡಿರುವ ಕೇರಳ ರಸ್ತೆಗಳು ಮಳೆಗೆ ಜಲಾವೃತವಾಗಿದ್ದು ಲಾರಿ, ಟ್ರಕ್ ಹೊರತುಪಡಿಸಿ ಬೇರೆ ವಾಹನಗಳು ಚಲಿಸಲು ಕಷ್ಟಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ದಿನದಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಕೇರಳದ ಮುತ್ತಂಗ, ಸುಲ್ತಾನ್ ಬತ್ತೇರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ವೀಕೆಂಡ್‌ಗೆ ಕೇರಳಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದವರಿಗೆ ಮಳೆರಾಯ ಶಾಕ್ ನೀಡಿದ್ದು, ಗುಂಡ್ಲುಪೇಟೆ ಕಡೆಯಿಂದ ಕೇರಳಕ್ಕೆ ಹೋಗುವವರು ಎರಡು ಬಾರಿ ಯೋಚನೆ ಮಾಡಬೇಕಿದೆ.
ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್‌ನಿಂದ 5 ಕಿಲೋ ಮೀಟರ್ ದೂರದಲ್ಲಿರುವ ಮುತ್ತಂಗವಿದ್ದು, ಅಲ್ಲಿಂದ ತೆರಳಲು ತೀರಾ ಪ್ರಯಾಸ ಪಡಬೇಕಿದೆ. ಇನ್ನು ಈ ಕುರಿತು ಮೂಲೆಹೊಳೆ ಆರ್‌ಎಫ್ಒ ನರೇಶ್ ಪ್ರತಿಕ್ರಿಯಿಸಿ, ಕೇರಳ ಭಾಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ, ನಮ್ಮ ಭಾಗದಲ್ಲಿ ತೊಂದರೆ ಇಲ್ಲಾ, ಮಳೆ ಹೆಚ್ಚಾದರೇ ಪೊಲೀಸ್ ಇಲಾಖೆ ವಾಹನಗಳಿಗೆ ನಿರ್ಬಂಧ ಹೇರಲಿದೆ ಎಂದು ತಿಳಿಸಿದರು.
ಜಲಾಶಯದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರಮುಖ ಸೂಚನೆ: ಇದೀಗ ಕದ್ರಾ ಜಲಾಶಯವೂ ಕೂಡ ಭರ್ತಿಯಾಗುವ ಹಂತವನ್ನು ತಲುಪಿರುವ ಹಿನ್ನೆಲೆ ಈ ಭಾಗದ ಸುತ್ತಮುತ್ತಲಿನ ಜನರಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಈ ಭಾಗದ ಹಳ್ಳ-ಕೊಳ್ಳ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಜಲಾನಯನ ಪ್ರದೇಶದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಇನ್ನು ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀಟರ್‌ಗಳಾಗಿದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟವು 29.70 ಮೀಟರ್ ತಲುಪಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ 30,000 ಕ್ಯೂಸೆಕ್ಸ್ ಆಗಿರುರುವುದರಿಂದ ಈ ಭಾಗದ ಜನರಿಗೆ ಪ್ರವಾದ ಭೀತಿ ಶುರುವಾಗಿದೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಕದ್ರಾ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಈ ಮಳೆಗಾಲದ ಅವಧಿಯಲ್ಲಿ ಜಲಾಶಯದ ಮಟ್ಟವು ಏರಿಕೆಯಾದಗಲೆಲ್ಲ ಯಾವುದೇ ಸಮಯದಲ್ಲಾದರೂ ನೀರನ್ನು ಹೊರಗಡೆ ಬಿಡಲಾಗುವುದು.
ಆದ್ದರಿಂದ ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದ ಅಣೆಕಟ್ಟೆಯ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹಾಗೂ ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಈ ಮೂಲಕ ಕೋರಲಾಗಿದೆ. ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಸಡೆಸದಂತೆ ಸೂಚನೆ ನೀಡಲಾಗಿದೆ.












Click it and Unblock the Notifications