ಹೊರ ರಾಜ್ಯಗಳಿಗೆ ಕರ್ನಾಟಕ ಕಸದ ತೊಟ್ಟಿಯಾ?

Posted By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 13: ಕೇರಳದಿಂದ ತ್ಯಾಜ್ಯಗಳನ್ನು ತಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸೇರಿದಂತೆ ಹಲವಡೆ ಸುರಿದು ಹೋಗುವುದು ಮಾಮೂಲಿಯಾಗಿತ್ತು. ಇದೀಗ ಇದೇ ಚಾಳಿಯನ್ನು ತಮಿಳುನಾಡು ಆರಂಭಿಸಿದ್ದು, ಹೊರ ರಾಜ್ಯದವರಿಗೆ ಕರ್ನಾಟಕ ಕಸದ ತೊಟ್ಟಿಯಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಕಾಡಂಚಿನ ಮಗುವಿನಹಳ್ಳಿಯಲ್ಲಿ ಸಮಸ್ಯೆಗಳದ್ದೇ ಕಾರುಬಾರು!

ಈ ಹಿಂದೆಯೂ ಕೇರಳದಿಂದ ತ್ಯಾಜ್ಯಗಳನ್ನು ತಂದು ಮೈಸೂರು ಮತ್ತು ಚಾಮರಾಜನಗರ, ಕೊಡಗು ಜಿಲ್ಲೆಗಳ ನಿರ್ಜನ ಪ್ರದೇಶ, ಅರಣ್ಯದಂಚಿನಲ್ಲಿ ಸುರಿಯುವುದು ಕಂಡು ಬಂದಿತ್ತು. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಕೆಲವರನ್ನು ಲಾರಿ ಸಹಿತ ಹಿಡಿದಿದ್ದರು. ಇದಾದ ಬಳಿಕ ಕೆಲವು ಸಮಯ ಕಸ ಸುರಿಯುವ ಪ್ರಕರಣ ಕಂಡು ಬಂದಿರಲಿಲ್ಲ. ಇದೀಗ ಮತ್ತೆ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕಸವನ್ನು ಸುರಿದಿರುವುದು ಕಾಣಸಿಗುತ್ತಿದ್ದು ಇದನ್ನು ತಮಿಳುನಾಡಿನಿಂದ ತಂದು ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Has Karnataka become dustbean to Kerala and Tamil Nadu?

ಕೇರಳದಿಂದ ಕಸವನ್ನು ಲಾರಿ ಸೇರಿದಂತೆ ಬೇರೆ ಬೇರೆ ವಾಹನಗಳಲ್ಲಿ ತರುತ್ತಿದ್ದಂತೆಯೇ ಈಗ ತಮಿಳುನಾಡಿನಿಂದಲೂ ತರಲಾಗುತ್ತಿದ್ದು, ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡದೆ ಬಿಡುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಚೆಕ್‍ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಹಿಂದೆ ಕೇರಳದಿಂದ ಕೊಳೆತ ಮಾಂಸಗಳ ತ್ಯಾಜ್ಯ, ಆಸ್ಪತ್ರೆ ಹಾಗೂ ಕ್ಲಿನಿಕಲ್ ತ್ಯಾಜ್ಯ, ಹೀಗೆ ಕೆಲವು ಮಣ್ಣಲ್ಲಿ ಕರಗದ ಮತ್ತು ಮಾರಕವಾಗಿರುವ ರಾಸಾಯನಿಕವನ್ನು ಲಾರಿಗಳಲ್ಲಿ ತುಂಬಿಸಿ ತಂದು ಅರಣ್ಯ ಪ್ರದೇಶದಲ್ಲಿ ಹಾಗೂ ಪಟ್ಟಣದ ಸಮೀಪದ ನಿರ್ಜನ ಸ್ಥಳಗಳಲ್ಲಿ ಸುರಿಯಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಚೆಕ್‍ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಿದ ಪರಿಣಾಮ ಸ್ಥಗಿತಗೊಂಡಿತ್ತು.

ಈಗ ತಮಿಳುನಾಡಿನಿಂದ ತ್ಯಾಜ್ಯಗಳನ್ನು ಬಟ್ಟೆಯಲ್ಲಿ ಸುತ್ತಿ ತಂದು ಹಂಗಳ ಗ್ರಾಮದಿಂದ ಪಟ್ಟಣದವರೆಗಿನ ನಿರ್ಜನ ಪ್ರದೇಶಗಳಲ್ಲಿ ಇತ್ತೀಚೆಗೆ ಸುರಿದು ಹೋಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಮಾರ್ಗದಲ್ಲಿ ಕೆಕ್ಕನಹಳ್ಳ ಹಾಗೂ ಮೇಲುಕಾಮನಹಳ್ಳಿ ಬಳಿ ಅರಣ್ಯ ತನಿಖಾಠಾಣೆಗಳಿವೆ. ಅಲ್ಲದೆ ಬಂಡೀಪುರದಲ್ಲಿ ಪೊಲೀಸ್ ಉಪಠಾಣೆಯಿದೆ. ಆದರೂ ಇಲ್ಲಿ ಯಾವುದೇ ವಾಹನಗಳನ್ನು ತಪಾಸಣೆ ಮಾಡದ ಪರಿಣಾಮವಾಗಿ ಹೊರರಾಜ್ಯದ ತ್ಯಾಜ್ಯಗಳು ಬರುತ್ತಿವೆ ಎಂಬುದು ಜನರ ಆರೋಪವಾಗಿದೆ. ಇನ್ನು ಮುಂದೆಯಾದರೂ ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ಚೆಕ್ ಪೋಸ್ಟ್ ಗಳಲ್ಲಿ ಬಿಗಿಯಾದ ತಪಾಸಣೆ ಮಾಡುವ ಮೂಲಕ ತ್ಯಾಜ್ಯ ರಾಜ್ಯದೊಳಕ್ಕೆ ಬರುವುದನ್ನು ತಡೆಗಟ್ಟಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The neighbouring states Kerala and Tamil Nadu are dumping garbages in Karnataka border from many days. The Gundlupet, which is Karnataka's border is becoming a dustbean for those two states.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ