ಹನೂರು: ಎಳ್ಳು ಅಮಾವಾಸ್ಯೆ ಹಿನ್ನೆಲೆ ಪ್ರಸಿದ್ಧ ಯಾತ್ರಸ್ಥಳ ಮಲೆ ಮಾದಪ್ಪನ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ
ಚಾಮರಾಜನಗರ, ಜನವರಿ, 11: ಎಳ್ಳು ಅಮಾವಾಸ್ಯೆ ಹಿನ್ನೆಲೆ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗಾರವೇ ಹರಿದು ಬಂದಿತ್ತು.
ಅಮಾವಾಸ್ಯೆ ಪೂಜೆ ಹಿನ್ನೆಲೆ ಬೆಂಗಳೂರು, ರಾಮನಗರ, ಕನಕಪುರ, ಮೈಸೂರು, ಮಂಡ್ಯ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು ನಂಜನಗೂಡು ಸೇರಿದಂತೆ ರಾಜ್ಯದ ವಿವಿಧಡೆಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಿ ವಿವಿಧ ಸೇವೆಗಳನ್ನು ಸಮರ್ಪಿಸಿ ದರ್ಶನ ಪಡೆದರು.

ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವ್ಯವಸ್ಥಿತ ಸರತಿ ಸಾಲು, ಶಿಫಾರಸ್ಸು ಪತ್ರ ತಂದವರಿಗೆ ನೇರದರ್ಶನ, 60 ವರ್ಷ ಮೇಲ್ಪಟ್ಟವರಿಗೂ ವಿಶೇಷ ದರ್ಶನ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
ಮಾದಪ್ಪನಿಗೆ ತ್ರಿಕಾಲ ಪೂಜೆಯ ಜೊತೆಗೆ ಎಳ್ಳಿನ ಎಣ್ಣೆಯಿಂದ ಅಭಿಷೇಕ, ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ದೇವಾಲಯದ ರಾಜಗೋಪುರ ಗರ್ಭಗುಡಿಯ ಗೋಪುರ, ಕಟ್ಟೆ ಬಸವೇಶ್ವರ ದೇವಾಲಯದ ಒಳಾಂಗಣ, ಹೊರಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು.
ಆಹಾರ ಪದಾರ್ಥಗಳ ಕಿಟ್ ವಿತರಣೆ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸೆಕ್ಯೂರಿಟಿ ಗಾರ್ಡ್ ಹಾಗೂ ಮಹಿಳಾ ನೌಕರರಿಗೆ ಮಾಜಿ ಸಚಿವ ವಿ.ಸೋಮಣ್ಣ ಅವರ ಪತ್ನಿ ಶೈಲಜಾ ಸೋಮಣ್ಣ ಆಹಾರ ಪದಾರ್ಥಗಳ ಕಿಟ್‌ಗಳನ್ನು ಇಂದು (ಜನವರಿ 11) ವಿತರಣೆ ಮಾಡಿದರು.
ಎಣ್ಣೆ ಮಜ್ಜನ ಹಾಗೂ ಎಳ್ಳಿನ ಅಮಾವಾಸ್ಯೆ ಪೂಜೆ ಹಿನ್ನೆಲೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಶೈಲಜಾ ಸೋಮಣ್ಣ ಮಹದೇಶ್ವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವಾಲಯದ ಶ್ರೀ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಮಹದೇಶ್ವರ ಬೆಟ್ಟ ಧಾರ್ಮಿಕ ಪುಣ್ಯಸ್ಥಳ, ಹಾಗಾಗಿ ಇಲ್ಲಿಗೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಈ ಹಿನ್ನೆಲೆ ಭಕ್ತರ ಸೇವೆಗಾಗಿ ನಿಮ್ಮ ಶ್ರಮ ಅಪಾರ. ಇದನ್ನು ಮನಗಂಡು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸುವುದರ ಮೂಲಕ ಭಕ್ತರಿಗೆ ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.
ಪ್ರಾಧಿಕಾರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಬೇಳೆ, ಧಾನ್ಯಗಳು, ಎಣ್ಣೆ, ಸಾಬೂನು, ಗೋದಿ ಹಿಟ್ಟು, ಅಕ್ಕಿ ಸೇರಿದಂತೆ 19 ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು. ಇನ್ನು ಮಹಿಳಾ ಸಿಬ್ಬಂದಿಗೆ 50 ಸೀರೆಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಡುಗೊರೆಯಾಗಿ ವಿತರಿಸಿದರು.












Click it and Unblock the Notifications