ಎಚ್.ವಿಶ್ವನಾಥ್ ರೋಲ್ ಕಾಲ್ ಗಿರಾಕಿ.!, ವಯಸ್ಸಾಗಿದೆ ಅಂತಾ ಮರ್ಯಾದೇ ಕೊಡ್ತಿದಿನಿ ಅಷ್ಟೇ: ಬೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?
ಚಾಮರಾಜನಗರ, ಜುಲೈ, 05: ಹಗರಣವೇ ಆಗಿಲ್ಲ, ಇನ್ನು ಹೇಗೆ ಆಚೆಗೆ ಬರಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ಕೊಟ್ಟರು. ಹಾಗೆಯೇ ಇದೇ ವೇಳೆ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಏ ಯಾರ್ರಿ.. ಅವ್ನು ವಿಶ್ವನಾಥ್ ಹಾ.. ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವಾ? ಅವ್ನು, ಅವನ ಮಗ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದು ಫೋಟೊ ಇದೆ. ಅವ್ನು ಏಕ ವಚನ ಬಳಸಿದ್ರೆ, ನನಗೂ ಕೂಡ ಅದಕ್ಕಿಂತ ಹೆಚ್ಚಿಗೆ ಮಾತನಾಡೋಕೆ ಬರುತ್ತದೆ ಎಂದರು.

ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದಿರೋದು. ಅವರ ಅಪ್ಪನಂಗೆ ಮಾತನಾಡುತ್ತೇನೆ. ಮೊದ್ಲು ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳಲಿ. ವಿಶ್ವನಾಥ್ ಥರ ನಾನು ರೋಲ್ ಕಾಲ್ ಗಿರಾಕಿ ಅಲ್ಲ. ವಯಸ್ಸಾಗಿದೆ ಅಂತಾ ಅಷ್ಟೇ ಬೆಲೆ ಕೊಡ್ತೀವಿ. ಅದನ್ನ ಉಳಿಸಿಕೊಳ್ಳಲಿ ಎಂದು ಹಳ್ಳಿಹಕ್ಕಿ ವಿಶ್ವನಾಥ್ ವಿರುದ್ಧ ಚಾಮರಾಜನಗರದಲ್ಲಿ ಸಚಿವ ಬೈರತಿ ಸುರೇಶ್ ವಾಗ್ದಾಳಿ ನಡೆಸಿದರು.
ಮುಡಾದಲ್ಲಿ ಯಾವುದೇ ಹಗರಣವಾಗಿಲ್ಲ. ಇನ್ನು ಹೇಗೆ ಆಚೆಗೆ ಬರಲಿದೆ, ಇದಕ್ಕೂ ಡಿ.ಕೆ.ಶಿವಕುಮಾರ್‌ಗೂ ಯಾವುದೇ ಸಂಬಂಧವಿಲ್ಲ. ಘಟನೆ ಈಗ ತನಿಖೆ ಹಂತದಲ್ಲಿದೆ ಎಂದು ಹೇಳುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಹಗರಣ ಎಂದೇ ಸಾಬೀತಾಗಿಲ್ಲ, ಸಿಬಿಐಗೆ ಏಕೆ ಕೊಡಬೇಕು? ನಮ್ಮ ರಾಜ್ಯದಲ್ಲಿ ಪೊಲೀಸರು ಇಲ್ವಾ? ಹಗರಣವೇ ಆಗಿಲ್ಲ ಎಂದು ದೃಢಪಡದೇ ಸಿಬಿಐಗೆ ಏಕೆ ಕೊಡಬೇಕು? ಬಿಜೆಪಿಯವರು ಸಿಬಿಐಗೆ ಕೊಟ್ಟು ಏನು ಮಹಾ ಮಾಡಿದ್ದಾರೆ?. ಅವರು ಎಷ್ಟು ಸಿಬಿಐಗೆ ಕೊಟ್ಟಿದ್ದಾರೆ? ಇಬ್ಬರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಲ್ಕು ವಾರಗಳ ಸಮಯ ಇದೆ. ಬಿಜೆಪಿ-ಜೆಡಿಎಸ್ ಅವರು ಹೇಳಿದಂಗೆ ಕೇಳುವುದಕ್ಕೆ ಆಗುವುದಿಲ್ಲ ಎಂದರು.
ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರು ಇದ್ದಾರೆ. ಅವರು ನಿರ್ಧಾರ ತೆಗೆದುಕೊಂಡ ಬಳಿಕ ಚರ್ಚೆ ನಡೆಸುತ್ತೇವೆ ಎಂದರು. ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಇರುವುದು ಒಂದೇ ಬಣ.. ಅದು ಕಾಂಗ್ರೆಸ್ ಬಣ ಎಂದರು.
ಅಧಿಕಾರಿಗಳ ಕಾರ್ಯಕ್ಕೆ ಮೂವರು ಸಚಿವರು ಗರಂ: ಚಾಮರಾಜನಗರದಲ್ಲಿಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಜಿಪಂ ಸಭಾಂಗಣದಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಕೆಯುಐಡಿಎಫ್‌ಸಿ ಹಾಗೂ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆ ಆರಂಭದಿಂದಲೇ ಅಧಿಕಾರಿಗಳ ಕಾರ್ಯ ವೈಖರಿಗೆ ಕೆಂಡಾಮಂಡಲರಾದ ಸಚಿವರು ನಗರಸಭೆ, ನಗರ ಮತ್ತು ಗ್ರಾಮಾಂತರ ಯೋಜನೆ ಅಧಿಕಾರಿಗಳು ಹಾಗೂ ಒಳಚರಂಡಿ ಇಲಾಖೆಗೆ ಅಧಿಕಾರಿಗಳಿಗೆ ಬೆವರಿಳಿಸಿದರು.
ಸಭೆಗೆ ಗೈರಾಗಿದ್ದ ಚಾಮರಾಜನಗರ ನಗರಸಭೆ ಎಇಇ ನಟರಾಜು ಅವರನ್ನು ಅಮಾನತು ಮಾಡುವಂತೆ ಸಚಿವ ಸುರೇಶ್ ಡಿಸಿ ಶಿಲ್ಪಾನಾಗ್‌ಗೆ ಸೂಚನೆ ಕೊಟ್ಟರು. ಬಳಿಕ, ಚಾಮರಾಜನಗರ ನಗರಸಭೆ ಆಯುಕ್ತ ರಾಮದಾಸ್, ನಗರ ಯೋಜನೆ ಅಧಿಕಾರಿ ರೇಣುಕಾ ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆಂದು ದೂರುಗಳು ಕೇಳಿಬಂದಿದ್ದವು.
ಆದ್ದರಿಂದ, ಶಾಸಕರು ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹರಿಹಾಯ್ದದ್ದರಿಂದ ಇವರಿಬ್ಬರನ್ನೂ ಬೇರೆಡೆ ವರ್ಗಾವಣೆ ಮಾಡಿ ಇಲಾಖೆ ಆಯುಕ್ತರಿಗೆ ಭೈರತಿ ಸೂಚನೆ ಕೊಟ್ಟರು.
ಚಾಮರಾಜನಗರ ಯೋಜನಾ ಅಧಿಕಾರಿಗಳು ಬಂದ ಅನುದಾನವನ್ನು ಬಳಸಿಕೊಳ್ಳದೇ ವಾಪಾಸ್ ಆದ ಮಾಹಿತಿ ಪಡೆದ ಸಚಿವ ವೆಂಕಟೇಶ್ ಗರಂ ಆದರು. ದುಡ್ಡು ಕೊಟ್ಟರೂ ಕೆಲಸ ಮಾಡದೇ ವಾಪಾಸ್ ಹೋಗಿದೆ, ನೀವೆಲ್ಲಾ ಅಧಿಕಾರಿಗಳಾಗಿ ಯಾಕೆ ಇರ್ತಿರಾ? 6 ತಿಂಗಳಾದರೂ ಯಾವ ಕೆಲಸವೂ ಪ್ರಗತಿಯಲ್ಲಿ ಇಲ್ಲವಲ್ಲಾ ಎಂದು ಛೀ ಮಾರಿ ಹಾಕಿದರು.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಶೇಕಡ 50ರಷ್ಟು ಒಳಚರಂಡಿ ವ್ಯವಸ್ಥೆ ಹಾಗೂ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಶೇಕಡ 75ರಷ್ಟು ಯುಜಿಡಿ ವ್ಯವಸ್ಥೆ ಇಲ್ಲದಿರುವುದನ್ನು ತಿಳಿದು ಕೂಡಲೇ ಅಂದಾಜು ಪಟ್ಟಿ ಕಳುಹಿಸಿ ಹಣ ಕೊಡುತ್ತೇನೆಂದು ಸುರೇಶ್ ಭರವಸೆ ಕೊಟ್ಟರು.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಲೇಔಟ್‌ಗಳನ್ನು ಮಾಡಿ, ಚುಡಾದ ಮಾಸ್ಟರ್ ಪ್ಲಾನ್‌ಗೆ ಎರಡು ದಿನದಲ್ಲಿ ಅನುಮೋದನೆ ಕೊಡಿಸುತ್ತೇನೆ ಎಂದು ಸುರೇಶ್ ತಿಳಿಸಿದರು.
ಇದೇ ವೇಳೆ, ಎ ಖಾತಾ ಮತ್ತು ಬಿ ಖಾತಾ ಮಾಡಲು ಮತ್ತೊಂದು ಅವಕಾಶ ಕೊಡಲಿದ್ದು ಈ ಬಾರಿ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಲಿದೆ. ಒಂದು ನಿರ್ಧಿಷ್ಟ ಸಮಯದ ಅವಕಾಶ ಕೊಟ್ಟು ಎ ಮತ್ತು ಬಿ ಖಾತಾ ಮಾಡಿಸಿಕೊಳ್ಳಲು ಅವಕಾಶ ನೀಡುತ್ತೇವೆ ಎಂದು ಸಭೆಗೆ ಸಚಿವ ಸುರೇಶ್ ಮಾಹಿತಿ ನೀಡಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಹೊಸದಾಗಿ 151 ಇಂದಿರಾ ಕ್ಯಾಂಟಿನ್ ತೆರೆಯಲಾಗುವುದು, ಕ್ಯಾಂಟಿನ್ ನ್ನು ಮತ್ತಷ್ಟು ಸಶಕ್ತಗೊಳಿಸಲು, ಜನರಿಗೆ ಬಗೆಬಗೆಯ ಆಹಾರ ಕೊಡಲು ಪ್ರದೇಶವಾರು ಮೆನು ಬದಲಿಸಲಾಗಿದೆ ಎಂದರು. ಈ ವೇಳೆ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ ಹಾಗೂ ಗಣೇಶ್ ಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications