ಗುಂಡ್ಲುಪೇಟೆ: ಕೂಲಿ ಅರಸಿ ಪೋಷಕರ ಜೊತೆ ಕೇರಳಕ್ಕೆ ಗುಳೆ ಹೊರಟ 24 ವಿದ್ಯಾರ್ಥಿಗಳು, ಶಿಕ್ಷಣಾಧಿಕಾರಿ ಹೇಳಿದ್ದೇನು?
ಚಾಮರಾಜನಗರ, ಜನವರಿ, 04: ಕೂಲಿ ಅರಸಿ ಕೇರಳಕ್ಕೆ ಗುಂಡ್ಲುಪೇಟೆ ಕೆಲ ಗ್ರಾಮದಿಂದ ಕಾರ್ಮಿಕರು ಗುಳೆ ಹೋಗುತ್ತಿದ್ದು, ಪಾಲಕರ ಜೊತೆ ಶಾಲೆ ಬಿಟ್ಟು ಮಕ್ಕಳು ತೆರಳಿದ್ದಾರೆ.
ಗುಂಡ್ಲುಪೇಟೆ ಕೇರಳ ರಾಜ್ಯದ ಗಡಿ ಹಂಚಿಕೊಂಡಿದ್ದು ಕರ್ನಾಟಕಕ್ಕಿಂತ ಅಲ್ಲಿ ದುಪ್ಪಟ್ಟು ಕೂಲಿ ಹಣ ಸಿಗುವ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು, ಭೀಮನಬೀಡು, ಕೂತನೂರು, ಬೇರಂಬಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಕಳೆದ 1 ವಾರದಿಂದ ವಲಸೆ ಹೋಗುತ್ತಿದ್ದಾರೆ.

ಪಾಲಕರ ಜೊತೆ ಹೊರಟ 24 ವಿದ್ಯಾರ್ಥಿಗಳು
ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮದ ಶಾಲೆಗಳಲ್ಲಿ 24 ಮಂದಿ ವಿದ್ಯಾರ್ಥಿಗಳು ಶಾಲೆ ತೊರೆದು ಪಾಲಕರ ಜೊತೆ ಹೊರಟ್ಟಿದ್ದು, ಕಡ್ಡಾಯ ಶಿಕ್ಷಣದಿಂದ ದೂರವಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನಲ್ಲಿ 12 ಮಂದಿ ಬಾಲಕಿಯರು, 12 ಮಂದಿ ಬಾಲಕರು ಗುಳೆ ಹೊರಟ ಪಾಲಕರ ಜೊತೆ ತೆರಳಿದ್ದಾರೆ ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಶಿಕ್ಷಣಾಧಿಕಾರಿ ಹೇಳಿದ್ದೇನು?: ಇನ್ನು ಗುಳೆ ಹೊರಟ ಪಾಲಕರ ಜೊತೆ ಮಕ್ಕಳು ತೆರಳಿರುವ ಹಾಗೂ ವಿದ್ಯಾರ್ಥಿಗಳ ಪಟ್ಟಿ ತಯಾರಿಸಲಾಗಿದ್ದು, ಅವರನ್ನು ಮತ್ತೆ ಶಾಲೆಗೆ ಕರೆತರಲಾಗುವುದು. ಅಲ್ಲಿನ ಜಿಲ್ಲಾಧಿಕಾರಿ ಮತ್ತು ಕಾರ್ಮಿಕ ಅಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗುವುದು ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ತಿಳಿಸಿದ್ದಾರೆ.
7 ವರ್ಷವಾದರೂ ಇಲ್ಲ ಪರಿಹಾರ
ರಸ್ತೆ ಅಗಲೀಕರಣದ ವೇಳೆ ಜಾಗವನ್ನು ವಶಕ್ಕೆ ಪಡೆದು 7 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ ಎಂದು ಸಂತ್ರಸ್ಥನೋರ್ವ ಸಚಿವ ಹಾಗೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.
ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯಲ್ಲಿ ಅಹವಾಲು ಸ್ವೀಕಾರದ ವೇಳೆ ಸೈಯದ್ ನಸೀರ್ ಅಹ್ಮದ್ ಎಂಬಾತ ಸಚಿವ ವೆಂಕಟೇಶ್, ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದರು. ಸ್ಥಳವನ್ನು ವಶಕ್ಕೆ ಪಡೆದು 7 ವರ್ಷಗಳಾದರೂ ನಮಗೆ ಬೇರೆ ಸಿಕ್ಕಿಲ್ಲ, ಪರಿಹಾರವೂ ಸಿಕ್ಕಿಲ್ಲ. ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ದೂರು ಕೊಡಲಾಗಿತ್ತು. ಆದರೂ ಪರಿಹಾರ ಏನೂ ಸಿಕ್ಕಿಲ್ಲ ಎಂದರು.
ಶಾಸಕರಿಂದ ದರ್ಪ: ಅಹವಾಲು ಸಲ್ಲಿಸುವ ವೇಳೆ ತನ್ನ ಸಮಸ್ಯೆ ಹೇಳಿಕೊಳ್ಳದಂತೆ ಶಾಸಕರ ಹಿಂಬಾಲಕರು ಹೊರಕ್ಕೆ ಕಳುಹಿಸಿದ್ದಾರೆ, ಶಾಸಕರು ದರ್ಪ ಮೆರೆದಿದ್ದಾರೆ ಎಂದು ಕಿಡಿಕಾರಿದರು.
ಸಂತ್ರಸ್ಥ ಹಾಗೂ ಶಾಸಕರ ನಡುವೆ ವಾರ್: ಬೇರೆಯವರು ನ್ಯಾಯಾಲಯಕ್ಕೆ ಹೋಗಿ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಸಂತ್ರಸ್ಥ ನಾಸಿರ್ ಹೇಳಿದ್ದಕ್ಕೆ ಸಿಡಿಮಿಡಿಗೊಂಡ ಶಾಸಕ ಸಿ.ಪುಟ್ಟರಂಗಶೆಟ್ಟಿ ಗರಂ ಆದರು. ಇದು ಚಾಲೆಂಜ್ ಆಗೇ ಬಿಡಲಿ, ಯಾರು ಪರಿಹಾರ ತೆಗೆದುಕೊಂಡಿದ್ದಾರೆ ತೋರಿಸು ಎಂದು ಕುಪಿತರಾದರು.












Click it and Unblock the Notifications